ಕೆಲವು ತಿಂಗಳಿನಿಂದ ರಾಜ್ಯ ರಾಜಕೀಯದ ಬಗ್ಗೆ ಮೌನವಾಗಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದ್ದಕ್ಕಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾ ಪ್ರಹಾರವನ್ನೇ ಡಿಸಿಎಂ ವಿರುದ್ದ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ಅವರಿಗೆ ನನ್ನನ್ನು ಕಂಡರೆ ಲವ್ ಜಾಸ್ತಿ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಅವರು ನನ್ನ ವಿಚಾರದಲ್ಲಿ ಕೇವಲ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಇದಕ್ಕೆ ಕೊನೇ ಹಾಡಬೇಕು. ಮಾಧ್ಯಮಗಳೇ ಒಂದು ಸೂಕ್ತ ವೇದಿಕೆ ಕಲ್ಪಿಸಲಿ. ನಾನು, ಕುಮಾರಸ್ವಾಮಿ ಅವರ ಜೊತೆ ಬಹಿರಂಗ ಚರ್ಚೆ ಮಾಡಲು ಸಿದ್ಧ, ಇದಕ್ಕೆ ಅವರು ಸಿದ್ದರಿದ್ದಾರಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದಿದ್ದಾರೆ.
ಕುಮಾರಸ್ವಾಮಿ ಅಸಹನೆಗೊಂಡಿರುವ ಮುಖ್ಯ ಕಾರಣ ಬಿಡದಿ ಟೌನ್‌ಶಿಪ್ ಯೋಜನೆ. ರೈತರಿಂದ ಭೂಮಿ ಕಸಿದು, ಪ್ರಭಾವಿ ಜನರಿಗೆ ಹಂಚಿಕೆ ಮಾಡುವ ದುರುದ್ದೇಶ ಸರ್ಕಾರಕ್ಕಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ 2-3 ಸಾವಿರ ಎಕರೆ ಭೂಮಿ ಏನೇನ್ ಆಗಿದೆ ಅಂಥ ಗೊತ್ತು. ಕರ್ನಾಟಕದ ಸಂಪತ್ತು ಲೂಟಿ ಹೊಡೆಯುವುದನ್ನು ತಡೆಯಲು ಐದು ವರ್ಷ ಜನ ಅಧಿಕಾರ ಕೊಡಬೇಕು. ಆಗ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಇಲ್ಲವಾದರೆ ಈಗಿರುವ ವ್ಯವಸ್ಥೆಯಲ್ಲಿ ನಿಮ್ಮ ಕರ್ಮಗಳನ್ನು ತೊಳೆಯಲು ಸಾಧ್ಯವಿಲ್ಲ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ. ಮೊದಲಿನಿಂದಲೂ ನನ್ನನ್ನು ಜೈಲಿಗೆ ಹಾಕಿಸಲೇಬೇಕು ಎಂದು ಕುಮಾರಸ್ವಾಮಿ ಅವರು ಸಂಕಲ್ಪ ಮಾಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಈಗಲೂ ಅದನ್ನೇ ಮುಂದುವರಿಸುತ್ತಿರುವುದಾಗಿ ಅವರೇ ಹೇಳಿದ್ದು, ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಎಂದಿದ್ದಾರೆ. ಹಬ್ಬ ಮುಗಿದ ಬಳಿಕ ಅವರಿಗೆ ಉತ್ತರ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಯಾರಿಗೋ ಒಬ್ಬರಿಗೆ ಐನೂರು ಎಕರೆ, ಇನ್ನೊಬ್ಬನಿಗೆ ಇನ್ನೂರು ಎಕರೆ, ಮತ್ತೊಬ್ಬನಿಗೆ ಮುನ್ನೂರು ಎಕರೆ ಹೀಗೆ ತಮಗೆ ಬೇಕಿದ್ದವರಿಗೆ ಹಂಚಿಕೊಂಡು ಹೋಗುತ್ತಿದ್ದಾರೆ. ಇದು ಜನರ ಜಮೀನು, ನಿಮ್ಮ ಸಂಪಾದನೆಯದ್ದಲ್ಲ ಎಂಬುದನ್ನು ಮರೆಯಬೇಡಿ. ನಿಮ್ಮ ಸರಕಾರ ಇನ್ನು ಎರಡು ವರ್ಷ ಇರುತ್ತೆ. ಆ ಎರಡು ವರ್ಷದಲ್ಲಿ ಈ ಯೋಜನೆಯನ್ನು ಮಾಡುತ್ತೀರಾ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ. ಈ ವ್ಯಕ್ತಿ ಎದೆ ಮುಟ್ಟಿಕೊಂಡು ಹೇಳಲಿ, ಎಷ್ಡು ಜನರ ಮನೆ ಹಾಳು ಮಾಡಿದ್ದಾರೆ ಎಂದು. ಶಾಂತಿ ನಗರ ಹೌಸಿಂಗ್ ಸೊಸೈಟಿ ಪ್ರಕರಣವನ್ನೇ ನೋಡಿ, ದಲಿತರಿಗೆ ಮನೆ ಮಾಡಿಕೊಡಲು ಮಾಡಿದ್ದ ಸೊಸೈಟಿ ಅದು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೂ 70-80 ಎಕರೆ ಜಮೀನು ಕೊಟ್ಟು ದಲಿತರಿಗೆ ಸೈಟು ಕೊಡಿ ಎಂದು ಹೇಳಿದ್ದರು ಎಂದು ಕುಮಾರಸ್ವಾಮಿ ಹಿಂದಿನ ಘಟನೆಯನ್ನು ಮೆಲುಕು ಹಾಕಿಕೊಂಡರು.
ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿರುವ ಡಿಕೆಶಿ, ಕುಮಾರಸ್ವಾಮಿ ಅವರು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಕುಟುಂಬ ನನ್ನ ಕುಟುಂಬದ ಮೇಲೆ ನಡೆಸುವ ಷಡ್ಯಂತ್ರ ಹೊಸತಲ್ಲ. ಈ ಹಿಂದೆ ನನ್ನ ತಂಗಿ, ತಮ್ಮ ಸೇರಿದಂತೆ ಎಲ್ಲರ ಮೇಲೂ ಪ್ರಯತ್ನ ಮಾಡಿದ್ದರು. ಇದಕ್ಕೆ ಕೊನೆ ಹಾಡಬೇಕು. ಈಗಲೂ ಅದನ್ನೇ ಮುಂದುವರಿಸುತ್ತಿರುವುದಾಗಿ ಅವರೇ ಹೇಳಿದ್ದು, ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಎಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಕೇಂದ್ರದ ಸಚಿವರು. ಅವರ ನೇತೃತ್ವದಲ್ಲೇ, ನಾಯಕತ್ವದಲ್ಲೇ ರಾಜ್ಯದ ನಿಯೋಗ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳ ಬಳಿ ಹೋಗಲು ಸಿದ್ಧ. ಅವರು ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದಾರೆ. ನಮ್ಮ ಸಹಕಾರ ಕೇಳಿದ್ದಾರೆ. ಅವರು ಎಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗುತ್ತಾರೋ ಸಂಪೂರ್ಣ ಸಹಕಾರ ನೀಡಲು ನಮ್ಮ ಸರ್ಕಾರ ಸಿದ್ಧ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ