ಪುಣೆ- ಮಹಾರಾಷ್ಟ್ರದ ಪುಣೆಯಲ್ಲಿ ಪ್ರೇಯಸಿಯನ್ನು ಬಚಾಯಿಸಲು ಪತ್ನಿಯ ಆಧಾರ್ ಕಾರ್ಡ್ ಬಳಸಿದ್ದ ಖದೀಮನನ್ನು ಮತ್ತು ಆತನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮನ ಬಗ್ಗೆ ಆತನ ಪತ್ನಿಗೆ ಮೊದಲೇ ಅನುಮಾನವಿದ್ದ ಕಾರಣ, ಆತನಿಗೆ ಗೊತ್ತಿಲ್ಲದೇ, ಆತನ ಪತ್ನಿ ಆತನ ಕಾರಿಗೆ ಜಿಪಿಎಸ್ ಅಳವಡಿಸಿದ್ದಳು. ಇದರಿಂದ ಆತ ಎಲ್ಲಿ ಹೋಗುತ್ತಾನೆ. ಏನು ಮಾಡುತ್ತಾನೆ. ಯಾರ ಜೊತೆ ಇದ್ದಾನೆ ಇದೆಲ್ಲ ಪತ್ನಿಗೆ ಗೊತ್ತಾಗುತ್ತಿತ್ತು.
ಇದರ ಜಾಡು ಹಿಡಿದ ಪತ್ನಿಗೆ ತನ್ನ ಆಧಾರ್ ಕಾರ್ಡ್ ಮಿಸ್ಯೂಸ್ ಆಗುತ್ತಿದೆ ಎಂಬ ಅನುಮಾನ ಬಂದಿದೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಲ ಗಂಟೆಗಳಲ್ಲೇ, ಆರೋಪಿ ಮತ್ತು ಆತನ ಪ್ರೇಯಸಿಯನ್ನು ಹಿಡಿದಿದ್ದಾರೆ. ಆರೋಪಿಗಳ ವಿರುದ್ಧ ಆಪಿಸಿ ಸೆಕ್ಷನ್ 419 ಅಡಿಯಲ್ಲಿ, ಪುಣೆಯ ಹಿಂಜೆವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆರೋಪಿ ಗುಜರಾತ್ ಮೂಲದ ಉದ್ಯಮಿಯಾಗಿದ್ದು, ಆತನ ಪತ್ನಿ ಅದೇ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ. ಈತ ತಾನು ಉದ್ಯಮದ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರವಾಸಕ್ಕೆ ಹೋಗುತ್ತೇನೆಂದು ಹೇಳಿದ್ದಾನೆ. ಆದರೆ ಜಿಪಿಎಸ್ ಟ್ರ್ಯಾಕ್ ಪರಿಶೀಲಿಸಿದಾಗ, ಅವನ ಕಾರ್ ಪುಣೆಯಲ್ಲಿರುವುದು ತಿಳಿದು ಬಂದಿದೆ. ಪುಣೆಯ ಯಾವ ಸ್ಥಳದಲ್ಲಿ ಕಾರ್ ಪಾರ್ಕ್ ಆಗಿದೆ ಎಂದು ನೋಡಿದಾಗ, ಹೊಟೇಲ್ ಒಂದರ ಅಡ್ರೆಸ್ ತೋರಿಸಿದೆ.
ಗೂಗಲ್‌ನಲ್ಲಿ ಆ ಹೊಟೇಲ್ ನಂಬರ್ ಪಡೆದು ಕಾಲ್ ಮಾಡಿದ ಪತ್ನಿ, ಹೆಸರು ತಿಳಿಸಿ, ಅವರು ಯಾರೊಂದಿಗಿದ್ದಾರೆಂದು ಕೇಳಿದಾಗ, ಅವರು ತಮ್ಮ ಮಡದಿ ಜೊತೆ ರೂಮ್ ಬುಕ್ ಮಾಡಿದ್ದಾರೆಂದು ಹೇಳಿದ್ದಾರೆ. ಆಗ ಹೊಟೇಲ್‌ನ ಸಿಸಿಟಿವಿ ಕ್ಯಾಮೆರಾ ಚೆಕ್ ಮಾಡಿದಾಗ, ಪತಿ ಬೇರೆ ಯುವತಿಯೊಂದಿಗೆ ರೂಮ್ ಶೇರ್ ಮಾಡಿಕೊಂಡಿದ್ದು, ಅದಕ್ಕಾಗಿ ತನ್ನ ಆಧಾರ್ ಕಾರ್ಡ್ ಬಳಸಿರುವುದು ಬೆಳಕಿಗೆ ಬಂದಿದೆ. ಆಗ ಪತ್ನಿ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಹೊಟೇಲ್ ಪರಿಶೀಲಿಸಿ, ಆರೋಪಿಗಳನ್ನು ಬಂಧಿಸುವಂತೆ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಕೆಲ ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ.