ನಾವು ಯಾವಾಗಲಾದರೂ ಸಿಹಿ ತಿಂಡಿ ತಿನ್ನುವಾಗ, ಎಲ್ಲಿ ಶುಗರ್ ಬರತ್ತೋ, ಅಥವಾ ಆರೋಗ್ಯ ಸಮಸ್ಯೆ ಉಂಟಾಗತ್ತೋ ಅನ್ನೋ ಟೆನ್ಶನ್‌ನಲ್ಲಿ ಇರ್ತೀವಿ. ಲಿಮಿಟ್‌ನಲ್ಲಿ ಸಕ್ಕರೆ ಪದಾರ್ಥವನ್ನ ತಿಂತೀವಿ. ಆದ್ರೆ ನಿಮಗೆ ಸಿಹಿ ಇಷ್ಟವಾಗಿದ್ದರೆ ನೀವು ಆರೋಗ್ಯಕರ ಸಿಹಿ ತಿನಿಸನ್ನ ತಿನ್ನಿ. ಬೆಲ್ಲದಿಂದ ಮಾಡಿದ ಶೇಂಗಾ ಚಿಕ್ಕಿ, ಬೆಲ್ಲ ಗೋಧಿ ಶೀರಾ, ಬೆಲ್ಲದ ಪಾಯಸ ಹೀಗೆ ಬೆಲ್ಲದ ಸಿಹಿ ಪದಾರ್ಥ ತಿನ್ನಿ. ಇಂಥ ಆರೋಗ್ಯಕರ ಸಿಹಿ ಪದಾರ್ಥಗಳಲ್ಲಿ ಎಳ್ಳಿನ ಲಾಡು ಕೂಡ ಒಂದು. ಇವತ್ತು ನಾವು ಎಳ್ಳಿನ ಲಾಡು ತಿನ್ನುವುದರಿಂದ ಆರೋಗ್ಯಕ್ಕಾಗುವ ಉಪಯೋಗವೇನು ಅನ್ನೋ ಬಗ್ಗೆ ತಿಳಿಸಲಿದ್ದೇವೆ.
ಚಳಿಗಾಲವಂತೂ ಶುರುವಾಗಿದೆ. ಈಗ ಎಳ್ಳು ತಿನ್ನಲು ಉತ್ತಮ ಸಮಯ. ಇನ್ನೇನು ಕೆಲ ದಿನಗಳಲ್ಲೇ ಸಂಕ್ರಾಂತಿ ಬರತ್ತೆ. ಆವಾಗ ಎಳ್ಳು ಬೆಲ್ಲ ತಿನ್ನಲೇಬೇಕು. ಈ ಸಮಯದಲ್ಲಿ ಎಳ್ಳಿನ ಲಾಡುವನ್ನೂ ಕೂಡ ಮಾಡಲಾಗತ್ತೆ. ಯಾಕೆ ಚಳಿಗಾಲದಲ್ಲಿ ಎಳ್ಳನ್ನ ಸೇವಿಸಲಾಗತ್ತೆ ಅಂದ್ರೆ, ಎಳ್ಳು ಉಷ್ಣ ಪದಾರ್ಥ. ಚಳಿಗಾಲದಲ್ಲಿ ತಂಪು ಜಾಸ್ತಿಯಾಗಿರುವುದರಿಂದ ಎಳ್ಳು ಸೇವಿಸಿದ್ದಲ್ಲಿ, ನಮ್ಮ ಆಹಾರ ಸಮತೋಲನದಲ್ಲಿರುತ್ತದೆ. ಆರೋಗ್ಯವೂ ಅಭಿವೃದ್ಧಿಯಾಗತ್ತೆ, ಜೀರ್ಣಕ್ರಿಯೆ ಸಮಸ್ಯೆಯೂ ಇರುವುದಿಲ್ಲ.
ಕಪ್ಪು ಮತ್ತು ಬಿಳಿ ಎಳ್ಳು ಎರಡೂ ಕೂಡ ಆರೋಗ್ಯಕ್ಕೆ ಉತ್ತಮವೇ. ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ರಕ್ತ ಪರಿಚಲನೆ ನಿಧಾನವಾಗುತ್ತದೆ. ಆಗ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಹಾಗೆ ಹೃದಯ ಸಮಸ್ಯೆ ಬರಬಾರದು, ಕೊಲೆಸ್ಟ್ರಾಲ್ ಕಡಿಮೆಯಾಗಬಾರದು ಅಂದ್ರೆ ಎಳ್ಳಿನ ಲಾಡುವನ್ನು ಸೇವಿಸಿ.
ಕೆಲಸದ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದರಿಂದ, ಅಥವಾ ಬೇರೆ ಯಾವುದಾದರೂ ವಿಷಯದ ಬಗ್ಗೆ ಟೆನ್ಶನ್ ತೆಗೆದುಕೊಂಡಾಗ ತಲೆ ನೋವು ಶುರುವಾಗುತ್ತದೆ. ಆಗ ನೀವು ಟೆನ್ಶನ್ ಫ್ರೀಯಾಗಲು, ಎಳ್ಳಿನ ಲಾಡು ಸೇವಿಸುವುದು ಉತ್ತಮ. ನಿಮ್ಮ ಮುಖದ ಮೇಲೆ ರಿಂಕಲ್ಸ್ ಆಗಿದ್ದರೆ, ನಿಮ್ಮ ತ್ವಚೆ ದೊರಗು ದೊರಗಾಗಿದ್ದರೆ, ನೀವು ಎಳ್ಳನ್ನು ಸೇವಿಸುವುದು ಉತ್ತಮ. ಇದು ನಿಮ್ಮ ತ್ವಚೆಯನ್ನು ಯವ್ವನದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.
ಮೂಳೆ ಗಟ್ಟಿಗೊಳ್ಳಲು ಎಳ್ಳಿನ ಲಾಡು ಸೇವಿಸುವುದು ಒಳ್ಳೆಯದು. ನ್ಯಾಚುರಲ್ ಆಗಿ ಮುಟ್ಟಾಗಲು ನೀವು ಎಳ್ಳನ್ನು ಸೇವಿಸಿಸಬಹುದು. ಪ್ರೀಪೋನ್ ಮಾತ್ರೆಗಿಂತ ಎಳ್ಳಿನ ಉಂಡೆ ಬೆಸ್ಟ್. ಹಾಗಂತ ಅಗತ್ಯಕ್ಕಿಂತ ಹೆಚ್ಚು ಎಳ್ಳಿನ ಲಾಡು ಸೇವಿಸಬೇಡಿ. ಇದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಆರೋಗ್ಯ ಏರುಪೇರಾಗುತ್ತದೆ. ಇನ್ನು ನಿಮಗೆ ಎಳ್ಳು ಸೇವಿಸಿದರೆ, ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.