Health Tips: ಹಾಲು ಅನ್ನೋದು ಮನುಷ್ಯ ಜನಿಸಿದಾಗಿನಿಂದ ಬೇಕಾಗುವ ಅವಶ್ಯಕ ಆರೋಗ್ಯ ಪೇಯ. ಮಗು ಜನಿಸಿದಾಗ, ತಾಯಿಹಾಲು ಕುಡಿಯುತ್ತದೆ. ಬೆಳೆದ ಮೇಲೆ ಹಸುವಿನ ಹಾಲು ಸೇವನೆ ಮಾಡಲಾಗುತ್ತದೆ. ಹೀಗೆ ಹಾಲು ಮನುಷ್ಯನ ಜೀವನದಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಹಾಲಿನ ಸೇವನೆಯಿಂದ ಆರೋಗ್ಯಕ್ಕೇನು ಲಾಭ ಅಂತಾ ತಿಳಿಯೋಣ ಬನ್ನಿ..
ಬಾಲ್ಯದಿಂದ ವೃದ್ಧಾಪ್ಯದವರೆಗೂ ನೀವು ನಿಮ್ಮ ಮೂಳೆಯನ್ನು ಗಟ್ಟಿಮುಟ್ಟಾಗಿ ಇರಿಸಬೇಕು ಎಂದಿದ್ದೀರಾದರೆ, ನೀವು ಪ್ರತಿದಿನ ಹಾಲಿನ ಸೇವನೆ ಮಾಡಬೇಕು. ಪ್ಯಾಕೇಟ್ ಹಾಲಿಗಿಂತ, ಹಸುವಿನ ಹಾಲಿನ ಸೇವನೆ ಅತೀ ಉತ್ತಮ. ಏಕೆಂದರೆ, ಇದರಲ್ಲಿ ಕ್ಯಾಲ್ಶಿಯಂ ಇರುತ್ತದೆ. ಕ್ಯಾಲ್‌ಶಿಯಂ ಅಂಶ ನಮ್ಮ ದೇಹ ಸೇರುವುದರಿಂದ ನಮ್ಮ ಮೂಳೆ ಗಟ್ಟಿಮುಟ್ಟಾಗುತ್ತದೆ.
ಹಾಲಿನಲ್ಲಿ ವಿಟಾಮಿನ್ ಬಿ12 ಮತ್ತು ವಿಟಾಮಿನ್ ಎ ಇರುತ್ತದೆ. ಇವೆರಡೂ ನಿಮ್ಮ ತ್ವಚೆಯನ್ನು ಅಂದವಾಗಿರಿಸುತ್ತದೆ. ಅಲ್ಲದೇ, ನಿಮ್ಮ ಸ್ಕಿನ್ ಸಾಫ್ಟ್ ಮತ್ತು ಕ್ಲೀನ್ ಆಗಿರುವಂತೆ ಮಾಡುತ್ತದೆ.
ಇನ್ನು ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದಲ್ಲಿ, ಅನ್ನ ಊಟ ಮಾಡುವ ಬದಲು 1 ಗ್ಲಾಸ್ ಹಾಲು ಕುಡಿದರೆ ಸಾಕು. ಊಟ ಮಾಡಿದ್ದಕ್ಕಿಂತಲೂ ಹೆಚ್ಚಿನ ಲಾಭ ನಿಮಗೆ ಸಿಗುತ್ತದೆ. ಅದರಲ್ಲೂ ಡ್ರೈಫ್ರೂಟ್ಸ್ ತಿಂದು ಹಾಲು ಕುಡಿದರೆ, ಶಕ್ತಿಯೂ ಸಿಗುತ್ತದೆ. ದೇಹದ ತೂಕ ಇಳಿಯಲು ಸಹಾಯವಾಗುತ್ತದೆ.
ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲ. ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದಲ್ಲಿ, ರಾತ್ರಿ ಮಲಗುವಾಗ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಮತ್ತು ಕಲ್ಲುಸಕ್ಕರೆ ಹಾಕಿ, ಕುದಿಸಿ, ಕುಡಿಯಿರಿ. ಇದರಿಂದ ನಿಮಗೆ ನಿದ್ದೆಯೂ ಬರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.