ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಂದು ವಾರದಿಂದ ಸುರಿದಿದ್ದ ಮುಂಗಾರು ಮಳೆ ತಾತ್ಕಾಲಿಕವಾಗಿ ಬ್ರೇಕ್ ನೀಡಿದೆ. ಇದೇ ಸೆಪ್ಟಂಬರ್ 27ರಿಂದ ಒಟ್ಟು 09 ಜಿಲ್ಲೆಗಳಲ್ಲಿ ಮತ್ತೆ ಜೋರಾಗಿ ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಲಬುರಗಿ, ಬೀದರ್, ಕೊಪ್ಪಳ, ಯಾದಗಿರಿ, ಬೆಳಗಾವಿಯಲ್ಲಿ ಸುರಿದಿದ್ದ ಮಳೆ ಇದೀಗ ಕಡಿಮೆ ಆಗಿದೆ. ಮುಂದಿನ 48 ಗಂಟೆಗಳ ಕಾಲ ರಾಜಾದ್ಯಂತ ಹಗುರ ಮಳೆ ಆಗುವ ನಿರೀಕ್ಷೆ ಇದೆ. ಇದರ ಹೊರತು ವ್ಯಾಪಕ ಮಳೆ, ಹವಾಮಾನ ಬದಲಾವಣೆಯ ಮುನ್ಸೂಚನೆ ಇಲ್ಲ. ಈ ವೇಳೆ ಕೊಂಚ ಬಿಸಿಲು ಆಗಾಗ ತಂಪು ಮತ್ತು ಮೋಡ ಕವಿದ ವಾತಾವರಣ ಕಂಡು ಬರಬಹುದು.
ಸೆಪ್ಟಂಬರ್ 27 ರಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರಿಸಲಿದೆ. ಕರಾವಳಿ ಹಾಗೂ ಒಳನಾಡು ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ 120 ಮಿಲಿ ಮೀಟರ್‌ನಷ್ಟು ಮಳೆ ಆಗಲಿದೆ. ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಕಾರಣಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.
ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆ. 27 ಮತ್ತು 28 ರಂದು ಎರಡು ದಿನ ಭಾರೀ ಮಳೆ ಆಘಲಿದೆ. ಕಲಬುರಗಿ, ರಾಯಚೂರು. ಯಾದಗಿರಿ ಜಿಲ್ಲೆಗಳಲ್ಲಿ ಮೂರು ದಿನ, ವಿಜಯಪುರ, ಬೀದರ್ ಮತ್ತು ಬಾಗಲಕೋಟೆಯಲ್ಲಿ ಎರಡು ದಿನ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದೆ. ಈ ವೇಳೆ ಕರಾವಳಿ ಭಾಗದಲ್ಲಿ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಐಎಂಡಿ ತಜ್ಞರು ಹೇಳಿದ್ದಾರೆ.
ನೆನ್ನೆ ರಾಜ್ಯದ ವಿವಿಧೆಡೆ ಹಗುರ ಮಳೆ ಆಗಿದೆ. ಗರಿಷ್ಠ ತಾಪಮಾನ ನೋಡುವುದಾದರೆ, ಕಾರವಾರದಲ್ಲಿ 31 ಡಿಗ್ರಿ ಸೆಲ್ಸಿಯಸ್, ಮಂಗಳೂರಿನ ಶಕ್ತಿನಗರ 30 ಡಿಗ್ರಿ ಸೆಲ್ಸಿಯಸ್, ಹಿರಿಯೂರಲ್ಲಿ 30 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 29, ದಕ್ಷಿಣ ಕನ್ನಡ 29, ರಾಯಚೂರು 29, ಹಾವೇರಿ 29, ಕೋಲಾರ 29, ಚಾಮರಾಜನಗರ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ