ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗ್ತಿದ್ದು, ಭೀಮಾ ನದಿ ರೌದ್ರಾವತಾರ ತಾಳಿದೆ. ಉತ್ತರ ಕರ್ನಾಟಕದ 3 ಜಿಲ್ಲೆಗಳಿಗೆ ಮಹಾ ವಿಪತ್ತು ಎದುರಾಗಿದೆ. ಜಲಾಶಯಗಳಿಂದ 5.10 ಲಕ್ಷ ಕ್ಯೂಸೆಕ್ ನೀರು ಹರಿದು ಬರ್ತಿದೆ. ಪರಿಣಾಮ ಹೊರಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಭೀಮಾ ತೀರದ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ಕಲಬುರಗಿಯಲ್ಲಿ ಪ್ರವಾಹ ಉಂಟಾಗಿದೆ.
ಮೂರು ಜಿಲ್ಲೆಗಳ 95ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. ನೂರಾರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. 58 ಕಾಳಜಿ ಕೇಂದ್ರಗಳಲ್ಲಿ 7,104 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಮಳೆಯಿಂದಾಗಿ 2.60 ಲಕ್ಷ ಹೆಕ್ಟೇರ್‌ನಷ್ಟು ಬೆಳೆಹಾನಿ ಸಂಭವಿಸಿದೆ. ಈ ಮಧ್ಯೆ, ಪ್ರವಾಹದ ನೀರಿಗೆ ಸಿಲುಕಿ ಕಲಬುರಗಿ ತಾಲೂಕಿನ ಸೋಮನಾಥದಲ್ಲಿ ಕೃಷಿ ಕಾರ್ಮಿಕ 50 ವರ್ಷದ ಅಶೋಕ ದೊಡ್ಡಮನಿ, ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳದಲ್ಲಿ 65 ವರ್ಷದ ಬಸಪ್ಪ ಮೃತಪಟ್ಟಿದ್ದಾರೆ. ಜೊತೆಗೆ 72 ಪ್ರಾಣಿಗಳು ಸಾವನ್ನಪ್ಪಿವೆ.
ಕಳೆದ 6 ದಿನಗಳಲ್ಲಿ ಭೀಮಾ ನದಿಗೆ 24 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬಂದಿದೆ. 7 ವರ್ಷದ ಬಳಿಕ ಮೊದಲ ಬಾರಿಗೆ ಯಾದಗಿರಿ ನಗರಕ್ಕೇ ಭೀಮಾ ನದಿ ನೀರು ನುಗ್ಗಿದೆ. ಸುಮಾರು 2 ಕಿಲೋ ಮೀಟರ್ ದೂರ, ಪ್ರವಾಹದ ನೀರು ಆವರಿಸಿಕೊಂಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಭೀಮಾ, ಕಾಗಿಣ, ಕಮಲಾವತಿ ಸೇರಿದಂತೆ ಹಲವು ನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಬೀದರ್-ಶ್ರೀರಂಗಪಟ್ಟಣ, ಕಲಬುರಗಿ-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಾಗಿಣಾ ನದಿಯ ಪ್ರವಾಹ ಶಹಾಬಾದ್ ಸಮೀಪದ ವಿಶ್ವರಾಧ್ಯ ಹಿರಡೇಶ್ವರ ಪುಣ್ಯಾಶ್ರಮಕ್ಕೆ ನುಗ್ಗಿದೆ. ಒಟ್ಟು 2.60 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿವೆ.
ಇನ್ನು, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಅಗತ್ಯ ಪರಿಹಾರ ಕ್ರಮ, ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ, ಕಂದಾಯ ಸಚಿವ ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ, ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.