ಕರ್ನಾಟಕ ಹೈಕೋರ್ಟ್ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 2018 ರಿಂದ 2025ರ ತನಕದ ಹಣಕಾಸು ಲೆಕ್ಕಪರಿಶೋಧನೆ ನಡೆಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರಿಗೆ ನಿರ್ದೇಶನ ನೀಡಿದೆ. ಲೆಕ್ಕಪರಿಶೋಧನೆ ವೇಳೆ ಯಾವುದೇ ಅಕ್ರಮಗಳು ಅಥವಾ ಹಣಕಾಸು ದುರುಪಯೋಗ ಪತ್ತೆಯಾದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಶಿವಪುತ್ರ ಎಂ. ಹೊನ್ನಳ್ಳಿ ಅವರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಹೊಸ ಸಮಿತಿಯನ್ನು ರಚಿಸಿ ಕಂಟ್ರೋಲರ್ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಸೂಚಿಸಿದ್ದಾರೆ. ವಿಸಿ ಅವರು ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಸೂಕ್ತ ಅರ್ಹತೆ ಹೊಂದಿರುವ ವ್ಯಕ್ತಿಯನ್ನು ನೇಮಿಸಬೇಕು. ಆಗುವವರೆಗೆ ಪೂಜಾ ದೊಡ್ಡಮನಿ ತಾತ್ಕಾಲಿಕವಾಗಿ ಪ್ರಭಾರ ನಿಯಂತ್ರಕರಾಗಿ ಕಾರ್ಯನಿರ್ವಹಿಸಬಹುದು.
ನ್ಯಾಯಾಲಯವು ಪೂಜಾ ದೊಡ್ಡಮನಿ ಮತ್ತು ಅರ್ಜಿದಾರ ಶಿವಪುತ್ರ ಇಬ್ಬರೂ 2009ರ ಯುಎಎಸ್ ಕಾಯ್ದೆಯ ಪ್ರಕಾರ ಕಾಂಪ್ಟ್ರೋಲರ್ ಹುದ್ದೆಗೆ ಅಗತ್ಯವಾದ ಅರ್ಹತೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ಕಾಂಪ್ಟ್ರೋಲರ್ ವರ್ಗಕ್ಕೆ ಅಥವಾ ಡೆಪ್ಯುಟಿ ಅಕೌಂಟೆಂಟ್ ಜನರಲ್ ಹುದ್ದೆಗೆ ಸೇರಿದವರಲ್ಲ ಎಂಬುದನ್ನೂ ನ್ಯಾಯಾಲಯ ದಾಖಲಿಸಿದೆ.
ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಲು ಈ ಆದೇಶ ನೀಡಲಾಗಿದೆ. ನಿಯಂತ್ರಕರ ಹುದ್ದೆ ನಾಲ್ಕು ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, 2018ರಿಂದ ಸುಮಾರು ಏಳು ವರ್ಷಗಳ ಕಾಲ ಉಸ್ತುವಾರಿ ವಹಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದರಿಂದ ಹಣಕಾಸು ಲೆಕ್ಕಪರಿಶೋಧನೆ ಅಗತ್ಯವೆಂದು ತೀರ್ಪು ನೀಡಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ