ಮೈಸೂರಿನಲ್ಲಿ ವೇಶ್ಯಾವಾಟಿಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದ ಡಿಸೆಂಬರ್ ನಲ್ಲಿ ಹೆಬ್ಬಾಳು ಪೊಲೀಸ್ ಠಾಣೆಯ ಬಳಿಯಿರುವ ಬಸವನಗುಡಿ ವೃತ್ತದ ಬಳಿಯಿರುವ ಯುನಿಕ್ ಎಂಬ ಹೆಸರಿನ ಸ್ಪಾ ಅಂಡ್ ಸಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆದಿತ್ತು ಅದದಾನಂತರ ಜನವರಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಸರಸ್ವತಿಪುರಂ ಪೊಲೀಸರು ಪತ್ತೆಹಚ್ಚಿ, ಕೆಎಸ್ಆರ್ಟಿಸಿ ನೌಕರನಾಗಿದ್ದ ರತನ್ ಎಂಬಾತ ಥೈಲ್ಯಾಂಡ್ನಿಂದ ಯುವತಿಯನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದನು. ಪೊಲೀಸರು ದಾಳಿ ಮಾಡಿ ಏಳು ಜನರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಿದ್ದರು.
ಅಲ್ಲಿಗೆ ನಿಲ್ಲದೆ ಇದೀಗ ಮೈಸೂರಿನಲ್ಲಿ ಮತ್ತೊಂದು ವೇಶ್ಯವಾಟಿಕೆ ಬೆಳಕಿಗೆ ಬಂದಿದೆ. ಮೈಸೂರು ತಾಲ್ಲೂಕಿನ ದಾಸನಕೊಪ್ಪಲಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ ಬೇಧಿಸಿದ್ದಾರೆ. ಓಡನಾಡಿ ಸಂಸ್ಥೆ ನೀಡಿದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣದ ಕ್ರಮಕ್ಕೆ ಒಪ್ಪಿದ್ದು, ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಓಡನಾಡಿ ಸಂಸ್ಥೆ, ಈ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದು, ಮೈಸೂರು ಜಿಲ್ಲೆಯ ಪೊಲೀಸರು ತಕ್ಷಣವೇ ತಂಡದೊಂದಿಗೆ ದಾಸನಕೊಪ್ಪಲು ಗ್ರಾಮದ ಒಂದು ಮನೆಯನ್ನು ಸುತ್ತುವರಿದರು. ದಾಳಿಯ ವೇಳೆ, ಆ ಮನೆಯಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಬೆಳಕಿಗೆ ಬಂದಿದ್ದು, 6 ಪುರುಷರು ಮತ್ತು ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಇನ್ನು ದಂಧೆಯ ಮುಖ್ಯ ಆರೋಪಿ ಮಂಜು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅವನು ಸುಮಾರು 30 ದಿನಗಳಿಗೊಮ್ಮೆ ಮನೆ ಬದಲಾಯಿಸುತ್ತಾ ವೇಶ್ಯಾವಾಟಿಕೆ ದಂಧೆ ಮುಂದುವರಿಸುತ್ತಿದ್ದ ಎನ್ನಲಾಗಿದೆ. ಬೇರೆ ಬೇರೆ ಸ್ಥಳಗಳಿಂದ ಯುವತಿಯರನ್ನು ಹಣ ಕೊಟ್ಟು ಕರೆಸಿಕೊಂಡು ಈ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ವೇಳೆ ಎರಡು ಯುವತಿಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇವರನ್ನು ರಕ್ಷಿಸಿ, ಪುನರ್ವಸತಿ ಕೇಂದ್ರಗಳಿಗೆ ಕಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 3 ದಿನಗಳ ಹಿಂದೆ ಇದೇ ಮನೆಯಲ್ಲಿ ನಕಲಿ ಪೇಯಿಂಗ್ ಗೆಸ್ಟ್ ಎಂದು ಯುವತಿಯರನ್ನು ಇರಿಸಲಾಗಿತ್ತು ಎಂಬ ಮಾಹಿತಿ ಕೂಡ ಸಿಕ್ಕಿದೆ. ಸ್ಥಳೀಯರು ಕೂಡ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದು, ಇಂತಹ ದಂಧೆಗಳನ್ನು ಬುಡಸಮೇತವಾಗಿ ಕಿತ್ತೆಸೆಯಬೇಕು ಎಂದು ಪೊಲೀಸರಿಗೆ ಆಗ್ರಹಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ