ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಜಾತಿಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಹೆಸರು ಇರೋದಕ್ಕೆ ಬಿಜೆಪಿ ವಿರೋಧಿಸಿದೆ. ಈ ನಡುವೆ ಲಿಂಗಾಯತ ಸಮುದಾಯದಲ್ಲಿ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಸಬೇಕು ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಪಂಚಮಸಾಲಿ ಲಿಂಗಾಯತ ಮುಖಂಡರ ಸಭೆಯಲ್ಲಿ ತೀವ್ರ ಚರ್ಚೆ ಹಾಗೂ ಗದ್ದಲ ಉಂಟಾಗಿದೆ.
ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಕೆಲವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ನಮೂದಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಲಿಂಗಾಯತರನ್ನ ಪ್ರತ್ಯೇಕ ಧರ್ಮವಲ್ಲದೆ ಗುರುತಿಸುವುದು ತಪ್ಪು ಎಂದು ಕೆಲವು ಮುಖಂಡರು ವಿರೋಧಿಸಿದರು.
ಇದಕ್ಕೆ ಸಂಬಂಧಿಸಿದಂತೆ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಪಂಚಮಸಾಲಿ ಸಮಾಜದ ಸದಸ್ಯರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ‘ಪಂಚಮಸಾಲಿ’ ಎಂದು ನಮೂದಿಸಬೇಕು. ಉಪಜಾತಿ ಕಾಲಂ ಖಾಲಿ ಬಿಡಬೇಕು ಎಂದು ತಿಳಿಸಿದ್ದಾರೆ.
ಇದಕ್ಕೆ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಾಜ್ಯದ 16 ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುಪಾಲು ಜನರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ‘ಪಂಚಮಸಾಲಿ ಲಿಂಗಾಯತ’ ಎಂದು ನಮೂದಿಸಬೇಕೆಂಬ ಅಭಿಪ್ರಾಯ ನೀಡಿದ್ದಾರೆ. ಡಿಜಿಟಲ್ ರೂಪದಲ್ಲಿ ಕೊಡಬೇಕಾದ ಜಾತಿ ಕೋಡ್ ‘A0868’ ಆಗಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವೀರಶೈವ ಮಹಾಸಭಾ ಧರ್ಮದ ಕಾಲಂನಲ್ಲಿ ‘ವೀರಶೈವ-ಲಿಂಗಾಯತ’ ಎಂದು ಬರೆಸಲು ಸೂಚನೆ ನೀಡಿದೆ. ಆದರೆ, ಪಂಚಮಸಾಲಿ ಲಿಂಗಾಯತ ನಾಯಕರು ಇದನ್ನು ವಿರೋಧಿಸಿದ್ದಾರೆ. ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಲು ‘ಪಂಚಮಸಾಲಿ ಲಿಂಗಾಯತ’ ಎಂದು ಬರೆಸಬೇಕು ಎಂದು ಒತ್ತಾಯಿಸಿದ್ದಾರೆ.
ಲಿಂಗಾಯತ ಹಾಗೂ ಪಂಚಮಸಾಲಿ ಲಿಂಗಾಯತ ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳು ಜಾತಿಗಣತಿ ಸಂದರ್ಭದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಮುದಾಯದ ನಾಯಕರು ಈ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದಾರೆ. ಸೆ.22ರಿಂದ ಆರಂಭವಾಗಲಿರುವ ಸಮೀಕ್ಷೆಗೆ ಮುನ್ನ, ಸೆ.19ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಭೆ ಮಹತ್ವಪೂರ್ಣ ತೀರ್ಮಾನಕ್ಕೆ ವೇದಿಕೆಯಾಗುವ ನಿರೀಕ್ಷೆಯಿದೆ.