www.karnatakatv.net : ರಾಯಚೂರು: ಒಂದೇ ಗರ್ಭಗುಡಿಯಲ್ಲಿ ಹಿಂದೂ- ಮುಸ್ಲೀಂ ದೇವರಿಗೆ ಪೂಜಿಸುತ್ತಿದ್ದು, ಸದ್ದಿಲ್ಲದೇ ಭಾವೈಕ್ಯತೆ ಸಾರುತ್ತಿದೆ.
ಒಂದೇ ದೇವಾಲಯದಲ್ಲಿ ಹಿಂದೂ-ಮುಸ್ಲಿo ದೇವರುಗಳು ಕಾಣಸಿಗೋದು ತುಂಬಾನೆ ಅಪರೂಪ.. ಹೀಗೆ.. ಒಂದೇ ಗರ್ಭಗುಡಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ದೇವರುಗಳು ಇರುವ ದೃಶ್ಯ ಕಂಡುಬರುವುದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಎಂಬ ಸಣ್ಣ ಗ್ರಾಮದಲ್ಲಿ. ಈ ಹಳ್ಳಿ ಎಲ್ಲ ಗ್ರಾಮಗಳಂತಲ್ಲ, ಹಿಂದೂ ದೇವರುಗಳಿಗೆ ಮುಸ್ಲಿಂ ಧರ್ಮದವರು ಭಕ್ತಿಯಿಂದ ನಡೆದುಕೊಳ್ತಾರೆ. ಇಸ್ಲಾಂ ದೇವರುಗಳಿಗೆ ಹಿಂದೂಗಳು ಭಕ್ತಿಯಿಂದ ಪೂಜಿಸುತ್ತಾರೆ. ಈ ಮೂಲಕ ಈ ಗ್ರಾಮ ಸದ್ದಿಲ್ಲದೆ ಭಾವೈಕ್ಯತೆಯನ್ನು ಸಾರುತ್ತಿದೆ.
ಹೌದು ದುರ್ಗಾಮಾತೆ ದೇವಾಲಯದ ಗರ್ಭಗುಡಿಯಲ್ಲಿಯೇ ಮುಸ್ಲಿಂ ಆಲಂಭಾಷಾನ ಫೀರ್ ಗಳನ್ನ ಇಡಲಾಗಿದೆ. ಹಿಂದೂಗಳು ಮುಸ್ಲಿಂ ದೇವರಿಗೆ ಹಾಗೂ ಮುಸ್ಲಿಮರು ಹಿಂದೂ ದೇವರುಗಳಿಗೆ ನಡೆದುಕೊಳ್ಳುತ್ತಾರೆ. ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ನಮಾಜ್ ಕೂಡ ಮಾಡುತ್ತಾರೆ. ಅಂದಹಾಗೆ ಹಿಂದೂ ಹಾಗೂ ಮುಸ್ಲಿಂರನ್ನು ಒಂದೇ ಗರ್ಭಗುಡಿಯಲ್ಲಿ ನೋಡಲಿಕ್ಕೆ ಸಿಗುವುದು ಅಪರೂಪ ಸರಿ. ಹೀಗಾಗಿ ಈ ದೇವಾಲಯಕ್ಕೆ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ.
ದಶಕಗಳ ಹಿಂದೆ ಬಾವಿಯಲ್ಲಿ ದೊರೆತ ಆಲಂಭಾಷಾ ಮೂರ್ತಿಯನ್ನ ತಂದು ಇಲ್ಲು ಪ್ರತಿಷ್ಠಾಪಿಸಿ ಪೂಜಿಸುತ್ತಿರೋ ಈತನಿಗೆ ಮನುಷ್ಯರಲ್ಲಿ ಬೇಧವಿದೆ, ಧರ್ಮವಿದೆ. ದೇವರುಗಳಲ್ಲಿ ಅದ್ಯಾವ ಧರ್ಮ, ಜಾತಿ, ಭಗವಾನ್ ಒಬ್ಬನೆ ಆದರೆ ನಾಮ ಮಾತ್ರ ಹಲವು ಎನ್ನುವ ಈತನ ಮಾತನ್ನು ಅಲ್ಲಗಳೆಯೋದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕುವುದು ನಾವು ನೋಡಿದ್ದೇವೆ. ಆದರೆ, ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ದೇವರುಗಳು ಸಹ ಒಂದೇ ದೇವಸ್ಥಾನದಲ್ಲಿ ದಶಕದಿಂದ ನೆಲೆಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿವೆ. ಕಲ್ಲೂರು ಗ್ರಾಮದಲ್ಲಿ ಒಂದೇ ಗರ್ಭಗುಡಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ದೇವರುಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ.
ಒಂದು ಭಾಗದಲ್ಲಿ ದುರ್ಗಾಮಾತೆ ವಿಗ್ರಹ ದೇವರು, ಅದರ ಮಗ್ಗುಲಲ್ಲಿ ಆಲಂಭಾಷಾ ದೇವರನ್ನು ಪ್ರತಿಷ್ಠಾಪಿಸಿರುವುದು ಇಲ್ಲಿ ವಿಶೇಷ. ಕಟ್ಟಡದಲ್ಲೂ ಹಿಂದೂ -ಮುಸ್ಲಿಂ ಭಾವೈಕ್ಯತೆ ಸಮ್ಮಿಲನವಾಗಿದೆ. ಮಸೀದಿ, ದೇವಾಲಯ ಹೋಲುವ ರೀತಿಯಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಒಂದು ಭಾಗದಲ್ಲಿ ಓಂಕಾರ, ಇನ್ನೊಂದು ಭಾಗದಲ್ಲಿ ಅರ್ಧಚಂದ್ರಾಕೃತಿ ನಡುವೆ ನಕ್ಷತ್ರವನ್ನು ಕೆತ್ತನೆ ಮಾಡಲಾಗಿದೆ. ಏನೇ ಆಗಲಿ ಭಾರತದಗ್ರಾಮಗಳಲ್ಲಿ ಇನ್ನೂ ಭಾವೈಕ್ಯತೆ ಜೀವಂತವಾಗಿದೆ ಎನ್ನುವುದಕ್ಕೆ ಈ ದೇಗುಲವೇ ಸಾಕ್ಷಿ..
ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು