ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಕರ್ನಾಟಕದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದೆ. ಅಲ್ಲದೇ ಕರ್ನಾಟಕದ 4ನೇ ಅತೀ ಶ್ರೀಮಂತ ದೇವಸ್ಥಾನವೆಂಬ ಖ್ಯಾತಿ ಕಟೀಲು ದೇವಸ್ಥಾನಕ್ಕೆ ಸಲ್ಲುತ್ತದೆ.
ಲಕ್ಷಾಂತರ ಭಕ್ತರನ್ನು ಹೊಂದಿರುವ ಕಟೀಲು ದೇವಿ ಪ್ರತಿದಿನ ವಿವಿಧ ತರಹದ ಅಲಂಕಾರದಿಂದ ಕಂಗೊಳಿಸುತ್ತಾಳೆ. ನವರಾತ್ರಿಯಲ್ಲಿ 9 ದಿನಗಳ ಕಾಲ ವಿಜೃಂಭಣೆಯಿಂದ ಆರಾಧನೆ ನಡೆಯುತ್ತದೆ. ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನಂದಿನಿ ನದಿಯ ಮಧ್ಯದಲ್ಲಿ ಕಟೀಲು ಪುಣ್ಯಕ್ಷೇತ್ರವಿರುವುದು ವಿಶೇಷ. ಇಂಥ ದೇವಿಗೆ ಕುತೂಹಲಕಾರಿ ಇತಿಹಾಸವಿದೆ. ಅದೇನು ಅನ್ನೋದನ್ನ ತಿಳಿಯೋಣ ಬನ್ನಿ.
ಶುಂಭ ನಿಶುಂಭರೆಂಬ ರಾಕ್ಷಸರನ್ನು ದುರ್ಗೆ ಸಂಹರಿಸಿದ ನಂತರ ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಋಷಿ ಮುನಿಗಳ ತಪಸ್ಸು ಭಂಗ ಮಾಡುವುದು, ಅವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದ. ಈ ಕಾರಣಕ್ಕೆ ಭೂಮಿಯಲ್ಲಿ ಯಜ್ಞ ನಡೆಯುವುದು ನಿಂತುಹೋಯಿತು. ಇದಕ್ಕೆ ಕೋಪಗೊಂಡ ದೇವತೆಗಳು ಮಳೆ ಸುರಿಸುವುದನ್ನ ನಿಲ್ಲಿಸಿದರು.
ಈ ಕಾರಣಕ್ಕೆ ಭೂಮಿಯಲ್ಲಿ ಬರಗಾಲ ಉಂಟಾಯಿತು. ಆಗ ಜಾಬಾಲಿ ಋಷಿಗಳು ಲೋಕ ಕಲ್ಯಾಣಕ್ಕಾಗಿ ಯಜ್ಞ ನಡೆಸಲು ನಿರ್ಧರಿಸಿದ್ದು, ಇದಕ್ಕೆ ಕಾಮಧೇನು ಎಂಬ ಹಸುವಿನ ಅಗತ್ಯವಿತ್ತು. ಆಗ ಇಂದ್ರನ ಬಳಿ ಹೋದ ಜಾಬಾಲಿ ಋಷಿ, ಯಜ್ಞಕ್ಕಾಗಿ ಕಾಮಧೇನು ಬೇಕೆಂದು ಕೇಳಿಕೊಂಡರು. ಆಗ ಇಂದ್ರ, ಕಾಮಧೇನು ವರುಣ ಲೋಕಕ್ಕೆ ಹೋಗಿದ್ದರಿಂದ ಅದರ ಮಗಳಾದ ನಂದಿನಿಯನ್ನು ಕರೆದೊಯ್ಯಲು ಹೇಳಿದನು.
ಆದರೆ ಜಂಬ ತೋರಿದ ನಂದಿನಿ ದರ್ಪದಿಂದ ಮಾತನಾಡಿ ಮಹರ್ಷಿಯ ಜೊತೆ ತೆರಳಲು ನಿರಾಕರಿಸುತ್ತಾಳೆ. ಇದರಿಂದ ಕುಪಿತಗೊಂಡ ಋಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ಶಾಪ ನೀಡುತ್ತಾರೆ. ಆಗ ನಂದಿನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮಿಸುವಂತೆ ಬೇಡುತ್ತಾಳೆ. ಆಗ ಋಷಿಗಳು ಶಾಪ ವಿಮೋಚನೆಗಾಗಿ ಆದಿ ಶಕ್ತಿಯನ್ನು ಪ್ರಾರ್ಥಿಸುವಂತೆ ಹೇಳುತ್ತಾರೆ.
ನಂದಿನಿಯ ಪ್ರಾರ್ಥನೆಗೆ ಓಗೊಟ್ಟ ದೇವಿ, ಶಾಪ ಸುಳ್ಳಾಗಿಸಲು ಆಗದ ಕಾರಣ, ನಂದಿನಿ ನದಿಯಾಗಿ ಹರಿಯಲೇಬೇಕು. ನಂತರ ತಾನು ಅವಳ ಮಗಳಾಗಿ ಬಂದು ಶಾಪ ವಿಮೋಚನೆ ಮಾಡುವೆ ಎಂದು ಮಾತು ನೀಡುತ್ತಾಳೆ. ಅದೇ ನಂದಿನಿ ಕಟೀಲು ಕ್ಷೇತ್ರದಲ್ಲಿ ನದಿಯಾಗಿ ಹರಿಯುತ್ತಾಳೆ.
ಇನ್ನೊಂದೆಡೆ ದರ್ಪದಿಂದ ಮೆರೆಯುತ್ತಿದ್ದ ಅರುಣಾಸುರ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ತನಗೆ ದೇವತೆಗಳಿಂದ, ಮನುಷ್ಯರಿಂದ, ಯಕ್ಷರಿಂದ, ನಾಲ್ಕು ಮತ್ತು ಎರಡು ಕಾಲುಗಳುಳ್ಳ ಜೀವಗಳಿಂದ, ಯಾವುದೇ ಆಯುಧಗಳಿಂದ ಮೃತ್ಯು ಬರಬಾರದೆಂದು ವರ ಪಡೆಯುತ್ತಾನೆ.
ಅಲ್ಲದೇ, ಅರುಣಾಸುರನಿಗೆ ಗಾಯತ್ರಿ ಮಂತ್ರದ ಉಪದೇಶವಾಗಿರುತ್ತದೆ. ಅವನು ಎಲ್ಲಿಯವರೆಗೆ ಭಕ್ತಿಯಿಂದ ಗಾಯತ್ರಿ ಮಂತ್ರ ಪಠಿಸುತ್ತಾನೋ ಅಲ್ಲಿಯತನಕ ಆತನಿಗೆ ಮರಣವಿರುವುದಿಲ್ಲ.
ವರ ಸಿಕ್ಕ ಮೇಲೆ ಅರುಣಾಸುರನ ದರ್ಪ ತಾರಕಕ್ಕೇರುತ್ತದೆ. ದೇವಲೋಕಕ್ಕೆ ಹೋದ ಅರುಣಾಸುರ ಅದನ್ನು ವಶಪಡಿಸಿಕೊಳ್ಳುತ್ತಾನೆ. ಪಂಚಪಾತಕಗಳನ್ನೂ ಮಾಡುತ್ತಾನೆ. ಈ ಬಗ್ಗೆ ಕಂಗಾಲಾದ ಇಂದ್ರ, ದೇವತೆಗಳ ಬಳಿ ಹೋಗಿ ಸಹಾಯ ಕೇಳುತ್ತಾನೆ. ತ್ರಿಮೂರ್ತಿಗಳು ಸೇರಿ ದೇವಿಯ ಬಳಿ ಸಹಾಯ ಕೇಳುತ್ತಾರೆ.
ಆಗ ದೇವಿ ಮೋಹಿನಿಯ ರೂಪ ತಾಳುತ್ತಾಳೆ. ಮೋಹಿನಿಯ ರೂಪಕ್ಕೆ ಮನಸೋತ ಅರುಣಾಸುರ ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಉತ್ತರಿಸದ ದೇವಿ ಬಂಡೆಯ ಬಳಿ ಹೋಗಿ ಮರೆಯಾಗುತ್ತಾಳೆ. ಇದರಿಂದ ಕೋಪಗೊಂಡ ಅರುಣಾಸುರ ಬಂಡೆ ಒಡೆಯುತ್ತಾನೆ. ಆಗ ದೇವಿ ದೊಡ್ಡ ದುಂಬಿಯ ರೂಪತಾಳಿ ಬಂದು ಅರುಣಾಸುರನ ಸಂಹಾರ ಮಾಡುತ್ತಾಳೆ. ಭ್ರಮರದ ರೂಪದಲ್ಲಿ ಬಂದ ದೇವಿಗೆ ಭ್ರಮರಾಂಬಿಕೆ ಎಂಬ ಹೆಸರು ಬರುತ್ತದೆ.
ರಾಕ್ಷಸನನ್ನು ಕೊಂದ ದೇವಿ ಶಾಂತಳಾಗಲು ಋಷಿಗಳು ಎಳನೀರಿನ ಅಭಿಷೇಕ ಮಾಡುತ್ತಾರೆ. ಆ ಪದ್ಧತಿ ಈಗಲೂ ಮುಂದುವರೆದಿದೆ. ಭ್ರಮರಾಂಬಿಕೆಗೆ ಈಗಲೂ ಎಳನೀರಿನ ಅಭಿಷೇಕ ಮಾಡಲಾಗುತ್ತದೆ.
ಇನ್ನು ಸಂಸ್ಕೃತದಲ್ಲಿ ಕಟಿ ಎಂದರೆ ಮಧ್ಯಭಾಗ, ಇಳ ಎಂದರೆ ಭೂಮಿ ಎಂದರ್ಥ. ದುರ್ಗಾಪರಮೇಶ್ವರಿ ದೇವಿ ನಂದಿನಿ ನದಿಯ ಮಧ್ಯ ಭಾಗದಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರು ಬಂದಿದೆ.