Honnavara News: ತುಂಬಿದ ಹೊಳೆಯಲ್ಲಿ ಶವ ಹೊತ್ತು ಸಾಗಿದ ಗ್ರಾಮಸ್ಥರು

Honnavara News: ಮೂಲಭೂತ ಸೌಲಭ್ಯಗಳ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗ್ರಾಮಸ್ಥರು ಮಾನವೀಯತೆಯನ್ನೇ ಪ್ರಶ್ನಿಸುವಂತಹ ಪರಿಸ್ಥಿತಿ ಎದುರಿಸಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ಯುವಕನ ಶವವನ್ನು ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ದಾಟಿಸಿ ಶವಸಂಸ್ಕಾರಕ್ಕೆ ಕೊಂಡೊಯ್ಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಳೆಯ ಹಿನ್ನೆಲೆ ಭಾಸ್ಕೇರಿ ಹೊಳೆ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಜೀವವನ್ನು ಪಣಕ್ಕಿಟ್ಟು ಹೊಳೆ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ.

ಗ್ರಾಮದ ಕ್ರಿಸ್ಟಿನ್ ರೊಡ್ರಿಗೀಸ್ (30) ಅನಾರೋಗ್ಯದಿಂದ ಮೃತಪಟ್ಟಿದ್ದು, ಶವಸಂಸ್ಕಾರಕ್ಕಾಗಿ ಗ್ರಾಮಸ್ಥರು ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ದಾಟಿಸಿ ಮೃತದೇಹವನ್ನು ಹೊತ್ತು ಸಾಗಿಸಿದ್ದಾರೆ. ಈ ದೃಶ್ಯಗಳು ಗ್ರಾಮದಲ್ಲಿನ ಮೂಲಸೌಕರ್ಯದ ಕೊರತೆಯನ್ನು ಮತ್ತೊಮ್ಮೆ ಬಯಲಿಗೆಳೆದಿವೆ.

ಸುಮಾರು 50ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.

ಮಳೆಗಾಲ ಬಂದಾಗಲೆಲ್ಲಾ ಇದೇ ಸಮಸ್ಯೆ ಎದುರಾಗುತ್ತಿದ್ದು, ಅನಾರೋಗ್ಯ, ತುರ್ತು ಪರಿಸ್ಥಿತಿ ಅಥವಾ ಅಂತ್ಯಕ್ರಿಯೆಗಳ ಸಂದರ್ಭದಲ್ಲೂ ಜೀವದ ಹಂಗು ತೊರೆದು ಹೊಳೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗ್ರಾಮಕ್ಕೆ ಅಗತ್ಯ ರಸ್ತೆ ಮತ್ತು ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

About The Author