Political News: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದ 11 ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಈಗಾಗಲೇ ನಗರ ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದ್ ಸೇರಿದಂತೆ ಕೆಲ ಅಧಿಕಾರಿಗಳನ್ನು ಅಮಾನತು ಮಾಡಿದೆ. ದುರಂತಕ್ಕೆ ಸಂಬಂಧಿಸಿದಂತೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮೂವರು ಆಯೋಜಕರು ಸೇರಿದಂತೆ ನಾಲ್ವರ ಬಂಧನವಾಗಿದೆ.
ಮುಂಬೈಗೆ ತೆರಳುತ್ತಿದ್ದವರು ಪೊಲೀಸ್ ಬಲಗೆ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಿಚಾರಣೆ..
ಇನ್ನೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮೂವರು ಆಯೋಜಕರು ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖವಾಗಿ ಮುಂಬೈಗೆ ತೆರಳುತ್ತಿದ್ದ ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಬಂಧಿತರಾಗಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ವಿಚಾರಣೆ ಮಾಡಿದ್ದಾರೆ.
ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅರೆಸ್ಟ್..
ಅಲ್ಲದೆ ಬೆಂಗಳೂರಿನ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದದ್ದರು. ಆದರೂ ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿರುವುದರಿಂದ ಜನರು ಗೊಂದಲಕ್ಕೊಳಗಾಗಿದ್ದರು. ಕ್ರೀಡಾಂಗಣದ ಒಳಗೆ ಸೆಲೆಬ್ರೇಷನ್ಗೆ ಉಚಿತ ಟಿಕೆಟ್ ಎಂದು ಹೇಳಿ, ಗೇಟ್ 9 ಮತ್ತು 10ರ ಬಳಿ ಮಧ್ಯಾಹ್ನ 1 ಗಂಟೆಗೆ ಟಿಕೆಟ್ ಸಿಗುತ್ತದೆ ಎಂದು ಹೇಳಿದ್ದರೂ ಸಹ ಟಿಕೆಟ್ ವಿತರಣೆ ಆಗದಿರುವುದು. ಬಳಿಕ ಮಧ್ಯಾಹ್ನ 3 ಗಂಟೆಗೆ ಸ್ಟೇಡಿಯಂಗೆ ಅಭಿಮಾನಿಗಳ ಪ್ರವೇಶ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಕಾರಣಕ್ಕೆ ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಬಂಧಿಸಲಾಗಿದೆ ಎನ್ನಲಾಗುತ್ತಿದೆ.
ಬಂಧಿಸುವ ಮೊದಲೇ ಕೆಎಸ್ಸಿಎ ಪದಾಧಿಕಾರಿಗಳು ಎಸ್ಕೆಪ್..
ಇನ್ನೂ ಆರ್ಸಿಬಿಯ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ ಬಳಿಕವಷ್ಟೇ ಕ್ರೀಡಾಂಗಣದತ್ತ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದು ಬಂದಿದ್ದರು. ಆದರೂ ಸಹ ಯಾರೊಬ್ಬರೂ ಗೇಟ್ ತೆರೆದಿರಲಿಲ್ಲ. ಹೀಗಾಗಿ ತೀವ್ರ ಜನಸಂದಣಿಯುಂಟಾಗಿ ಸ್ಟೇಡಿಯಂ ಒಳಗೆ ಹೋಗುವ ಭರದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ್ದು, ಅದರಲ್ಲಿ 11 ಅಭಿಮಾನಿಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.ಪ್ರಮುಖವಾಗಿ ಅನುಮತಿ ಇಲ್ಲದಿದ್ದರೂ ಆರ್ಸಿಬಿ ವಿಜಯೋತ್ಸವಕ್ಕೆ ಮುಂದಾಗಿದ್ದ ಕೆಎಸ್ಸಿಎ ಕಾರ್ಯದರ್ಶಿ ಶಂಕರ್, ಖಜಾಂಜಿ ಜಯರಾಮ್ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಪೊಲೀಸರು ಬರುವ ಮುನ್ನವೇ ಬಂಧನ ಭೀತಿಯಿಂದ ಇಬ್ಬರು ನಾಪತ್ತೆಯಾಗಿದ್ದಾರೆ.
ಆರೋಪಿಗಳು ತಪ್ಪಿಸಿಕೊಳ್ಳೋಕೆ ನೆರವಾದ್ರಾ ಸಿಎಂ ಮಾತುಗಳು..?
ಆದರೆ ಸರ್ಕಾರದ ವಿಚಾರದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದಾಗ ನಿನ್ನೆಯಷ್ಟೇ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅವರು ಕೆಎಸ್ಸಿಎ, ಆರ್ಸಿಬಿ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ ಮೆಂಟ್ ಎಂದು ಹೇಳುವ ಬದಲು ತಪ್ಪಿತಸ್ಥರು ಅಂತ ಹೇಳಬಹುದಾಗಿತ್ತು. ಆದರೆ ಸಿಎಂ ಅವರ ಈ ಸುಳಿವು ಆರೋಪಿಗಳಿಗೆ ತಪ್ಪಿಸಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಸುದ್ದಿಗೋಷ್ಠಿ ಮುಗಿಯುವುದರೊಳಗೆ ಪರಾರಿ ಪ್ಲ್ಯಾನ್ ಮಾಡಿದ್ದ ಕೆಎಸ್ಸಿಎ ಪದಾಧಿಕಾರಿಗಳು ನಾಪತ್ತೆಯಾಗಿದ್ದಾರೆ. ಈ ಮೂಲಕ ಬಂಧನವಾಗಬೇಕಿದ್ದವರಿಗೆ, ತಪ್ಪಿಸಿಕೊಳ್ಳಲು ಸಿಎಂ ಮಾತುಗಳೇ ನೆರವಾದವಾ ಎನ್ನುವ ಪ್ರಶ್ನೆ ಉಧ್ವವಿಸಿದೆ.