ವಿಜಯನಗರ: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಹೊಸಪೇಟೆ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಪೊಲೀಸರು ಹಿಂದೂಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಪೊಲೀಸರ ಕೃತ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೊಸಪೇಟೆಯ ಗಾಂಧಿಚೌಕ್‍ದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಬಾಯಿಗೆ ಕೇಸರಿ ಬಟ್ಟೆ ಧರಿಸಿ ಹಿರೇಹಡಗಲಿಯ ಹಾಲಸ್ವಾಮಿಮಠದ ಅಭಿನವ ಹಾಲಶ್ರೀ ಅವರ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ.
ಹಿಂದೂ ಪರ ಸಂಘಟನೆಗಳು ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹೊಸಪೇಟೆ ಬಂದ್ ಕರೆ ಹಿನ್ನಲೆ ಅನುಮತಿ ಪಡೆಯದೇ ಪ್ರತಿಭಟನೆ ಆಯೋಜಿಸಿದ್ದರು. ಹೀಗಾಗಿ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಈ ವರ್ತನೆ ವಿರುದ್ಧ ಶ್ರೀರಾಮ ಸೇನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶ್ರೀರಾಮ ಸೇನೆ ಮುಖಂಡ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯಿಸಿ, ಹಿಂದೂ ಹತ್ಯೆಯಾದರು ರಾಜ್ಯ ಸರ್ಕಾರ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕಿ, ಹೋರಾಟ ದಮನ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರರನ್ನು ಬಂಧಿಸುತ್ತಿದ್ದಾರೆ ಅಂದರೆ ಹಿಂದೂಗಳ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಭಟನೆ ಬಳಿಕ ಛತ್ರಪತಿ ಶಿವಾಜಿ ಮೂರ್ತಿಯನ್ನು ದೇವಸ್ಥಾನ ಮೂಲೆ ಸೇರಿಸಿದ್ದಾರೆ. ನಂತರದಲ್ಲಿ ಹಿಂದೂ ಕಾರ್ಯಕರ್ತರು ದೇವಸ್ಥಾನದಿಂದ ಶಿವಾಜಿ ಮೂರ್ತಿಯನ್ನು ತೆಗೆದುಕೊಂಡು ಹೋಗಲು ಬಾರದೆ ಪ್ರತಿಭಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಸದ್ಯ ಪಾದಗಟ್ಟೆ ಆಂಜನೇಯ ದೇವಸ್ಥಾನದಲ್ಲಿ ಶಿವಾಜಿ ಮೂರ್ತಿ ಅನಾಥವಾಗಿದೆ
ಪ್ರತಿಭಟನೆಯ ಹಿನ್ನೆಲೆ ಪೊಲೀಸರು ಅಭಿನವ ಹಾಲಶ್ರೀಗಳನ್ನು ಬಂಧಿಸಿದ್ದಾರೆ. ಹಿಂದೂ ಕಾರ್ಯಕರ್ತರು ಹಾಲಶ್ರೀಗಳ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಹೊಸಪೇಟೆಯ ಪಿಐ ಶ್ರೀನಿವಾಸ್ ರಾವ್ ಸ್ವಾಮಿಜೀಗೆ ಕೈ ಮುಗಿದು ಪ್ರತಿಭಟನೆ ಕೈ ಬಿಡಿ ಅಂತ ಮನವಿ ಮಾಡಿದ್ದರು.