ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಪಂಜಾಬ್‌ನ ರೋಪರ್ ವಲಯದ ಡಿಐಜಿ ಹರ್ ಚರಣ್ ಸಿಂಗ್ ಬುಲ್ಲಾರ್ ಅವರನ್ನು ಸಿಬಿಐ ಬಂಧಿಸಿದೆ. ಅವರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಅಧಿಕಾರಿಗಳು ಅಚ್ಚರಿ ಮೂಡಿಸುವ ಮಟ್ಟದ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದಾರೆ. ನಗದು, ಚಿನ್ನಾಭರಣ, ಕಂತೆ ಕಂತೆ ನೋಟುಗಳು, ವಜ್ರ, ದುಬಾರಿ ವಾಚ್‌ಗಳು ಸೇರಿದಂತೆ ಸಿಕ್ಕಿದ್ದು ಸಂಪತ್ತಿನ ಖಜಾನೆಯೇ ಸರಿ. ಕೇವಲ 8 ಲಕ್ಷ ರೂ. ಲಂಚದ ಪ್ರಕರಣದಲ್ಲಿ ನಡೆದ ದಾಳಿ, ಈ ಭ್ರಷ್ಟ ಅಧಿಕಾರಿಯ ಬೃಹತ್ ಅಕ್ರಮ ಆಸ್ತಿಯನ್ನು ಬಹಿರಂಗಪಡಿಸಿದೆ.
2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಹರ್ ಚರಣ್ ಸಿಂಗ್ ಬುಲ್ಲಾರ್ ಪಂಜಾಬ್‌ನ ರೋಪರ್ ವಲಯದಲ್ಲಿ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಕಾಶ್ ಬಟ್ಟಾ ಎಂಬ ಸ್ಕ್ರ್ಯಾಪ್ ವ್ಯಾಪಾರಿಯಿಂದ ಕ್ರಿಮಿನಲ್ ಕೇಸ್ ಇತ್ಯರ್ಥಗೊಳಿಸಲು 8 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು. ಲಂಚ ನೀಡದಿದ್ದರೆ ವ್ಯವಹಾರಕ್ಕೆ ತೊಂದರೆ ಉಂಟುಮಾಡುವುದಾಗಿ ಅವರು ಬೆದರಿಸಿದ್ದಾಗಿ ವ್ಯಾಪಾರಿ ಸಿಬಿಐಗೆ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ಅಖಾಡಕ್ಕಿಳಿದ ಸಿಬಿಐ ಅಧಿಕಾರಿಗಳು, ಮಧ್ಯವರ್ತಿ ಕೃಷ್ಣ ಮುಖಾಂತರ ಲಂಚ ಸ್ವೀಕರಿಸುವ ವೇಳೆ ಹರ್ ಚರಣ್ ಸಿಂಗ್‌ರನ್ನು ರೆಡ್ ಹ್ಯಾಂಡಾಗಿ ಬಂಧಿಸಿದರು. ಕೃಷ್ಣನನ್ನೂ ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.
ಶೋಧ ಕಾರ್ಯಾಚರಣೆಯಲ್ಲಿ ಸಿಬಿಐ ಅಧಿಕಾರಿಗಳು 5 ಕೋಟಿ ರೂಪಾಯಿಗೂ ಹೆಚ್ಚು ನಗದು, 1.5 ಕೆಜಿ ಚಿನ್ನಾಭರಣ, ನೂರಾರು ಕೋಟಿ ರೂ. ಮೌಲ್ಯದ ಜಮೀನು ಮತ್ತು ನಿವೇಶನದ ದಾಖಲೆಗಳು, ಮರ್ಸಿಡಿಸ್ ಮತ್ತು ಆಡಿ ಕಾರುಗಳ ಕೀಗಳು, 22 ದುಬಾರಿ ವಾಚ್‌ಗಳು, 40 ಲೀಟರ್ ಇಂಪೋರ್ಟೆಡ್ ಮದ್ಯ, ಡಬಲ್ ಬ್ಯಾರಲ್ ಶಾಟ್‌ಗನ್, ಪಿಸ್ತೂಲ್, ರಿವಾಲ್ವರ್ ಮತ್ತು ಏರ್‌ಗನ್ ಸಹ ವಶಪಡಿಸಿಕೊಂಡಿದ್ದಾರೆ. ಮಧ್ಯವರ್ತಿ ಕೃಷ್ಣನಿಂದ 21 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಬುಲ್ಲಾರ್‌ರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ರಾತ್ರಿಯಿಡೀ ಮುಂದುವರಿದಿದ್ದು, ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ವಿಶೇಷವೆಂದರೆ, ಹರ್ ಚರಣ್ ಸಿಂಗ್ ಬುಲ್ಲಾರ್‌ರನ್ನು ಹಿಂದಿನ ದಿನಗಳಲ್ಲಿ ದಕ್ಷ ಮತ್ತು ನಿಷ್ಠಾವಂತ ಅಧಿಕಾರಿ ಎಂದು ಕೊಂಡಾಡಲಾಗುತ್ತಿತ್ತು. ಅವರು ಡ್ರಗ್ಸ್ ಮಾಫಿಯಾ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ನಡೆಸಿ ಖ್ಯಾತಿಗೆ ಪಾತ್ರರಾಗಿದ್ದರು. ಅದೇ ಸಾಧನೆಯ ಆಧಾರದಲ್ಲಿ ಡಿಐಜಿಯಾಗಿ ಬಡ್ತಿ ಪಡೆದಿದ್ದ ಈ ಅಧಿಕಾರಿಯ ಭ್ರಷ್ಟಾಚಾರದ ಮುಖವಾಡ ಇದೀಗ ಸಂಪೂರ್ಣವಾಗಿ ಬಯಲಾಗಿದೆ. ಅಕ್ರಮ ಆಸ್ತಿಯ ಪ್ರಮಾಣ ಕಂಡು ಸಿಬಿಐ ಅಧಿಕಾರಿಗಳೇ ದಂಗಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ