Information: ಸಿಹಿ ತಿಂಡಿಗಳಲ್ಲಿ ಮೈಸೂರ್ ಪಾಕ್ ಅಂದ್ರೆ ಸಖತ್ ಫೇಮಸ್. ಅದರಲ್ಲೂ ಕರ್ನಾಟಕದಲ್ಲಿ ಟಾಪ್ ಲೆವಲ್‌ನಲ್ಲಿ ಇರುವ ಸ್ವೀಟ್ ಅಂದ್ರೆ ಅದು ಮೈಸೂರ್ ಪಾಕ್. ಎಲ್ಲರೂ ಇಷ್ಟ ಪಟ್ಟು ತಿನ್ನುವ ಈ ಸಿಹಿ ತಿಂಡಿ ತಯಾರು ಮಾಡಿದ್ದು ಯಾರು..? ಹೇಗೆ ತಯಾರಿಸಿದ್ದು..? ಯಾಕೆ ಈ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಮೈಸೂರು ಮಹಾರಾಜರ ಸಂಸ್ಥಾನದಲ್ಲಿ ಕಾಕಾಸುರ ಮಾದಪ್ಪ ಎಂಬುವವರು ಬಾಣಸಿಗನ ಕೆಲಸವನ್ನು ಮಾಡುತ್ತಿದ್ದರು. ಮೈಸೂರು ಮಹಾರಾಜರಿಗೆ ಇವರೇ ಊಟ ರೆಡಿ ಮಾಡಿ ಬಡಿಸುತ್ತಿದ್ದುದು. ಒಂದು ದಿನ ಮಹಾರಾಜರಿಗೆ ಸಿಹಿ ತಿಂಡಿ ತಿನ್ನಬೇಕು ಎಂದು ಮನಸ್ಸಾಯಿತಂತೆ. ಅವರು ಕಾಕಾಸುರ ಮಾದಪ್ಪ ಅವರನ್ನು ಕರೆದು, ನನಗೆ ಸಿಹಿ ತಿಂಡಿ ತಿನ್ನಲು ಮನಸ್ಸಾಗಿದೆ. ಇಂದು ಊಟಕ್ಕೆ, ಸ್ಪೆಶಲ್ ಆಗಿರುವ ಸಿಹಿ ತಿಂಡಿ ತಯಾರಿಸಿ ಎಂದು ಆದೇಶ ನೀಡಿದರಂತೆ.
ಆದರೆ ಮಾದಪ್ಪ ಅವರ ಬಳಿ ಕೆಲವೇ ಕೆಲವು ಸಮಯ ಮತ್ತು ಮೂರೇ ಮೂರು ವಸ್ತುಗಳು ಇತ್ತಂತೆ. ಸಕ್ಕರೆ, ತುಪ್ಪ ಮತ್ತು ಕಡ್ಲೆಹಿಟ್ಟು. ಕೆಲ ಸಮಯದಲ್ಲೇ ಈ ವಸ್ತುಗಳಿಂದ ಸಿಹಿ ತಿಂಡಿ ತಯಾರಿಸಿ, ಕೊಡಬೇಕು ಎಂದು ಮಾದಪ್ಪ, ಪ್ಯಾನ್ ಇಟ್ಟು ಬಿಸಿ ಮಾಡಿ, ತುಪ್ಪ ಹಾಕಿ ಕಡಲೆ ಹಿಟ್ಟನ್ನು ಘಮ ಬರುವವರೆಗೂ ಹುರಿದುಕೊಂಡರು. ಬಳಿಕ, ಸಕ್ಕರೆ ಪಾಕ ತಯಾರಿಸಿ, ಕಡಲೆ ಹಿಟ್ಟು ಬೆರೆಸಿ, ಮೈಸೂರು ಪಾಕ್ ತಯಾರಿಸಿದರು.
ರಾಜರ ಮುಂದೆ ಹೋಗಿ, ಮೈಸೂರು ಪಾಾಕಿನ ತಟ್ಟೆ ಇಟ್ಟು, ಸವಿಯಲು ಹೇಳಿದರು. ರಾಜರು ಸಿಹಿ ಸವಿದು, ಖುಷಿಯಾದರು. ಈ ಸಿಹಿಯ ಹೆಸರು ಕೇಳಿದಾಗ, ಮಾದಪ್ಪ ತಾನು ಇದನ್ನು ಮೊದಲ ಬಾರಿ ತಯಾರಿಸಿದ್ದು, ಇದು ತನ್ನದೇ ರೆಸಿಪಿ ಎಂದು ಹೇಳಿದರು. ಆಗ ಮಹಾರಾಜರು, ಇದು ಇನ್ನುಮುಂದೆ ಮೈಸೂರನ್ನು ಪ್ರತಿನಿಧಿಸುವ ಸಿಹಿಯಾಗಿರುತ್ತದೆ. ಇದರ ಹೆಸರು ಮೈಸೂರು ಪಾಕ್ ಎಂದು ನಾಮಕರಣ ಮಾಡಿದರು.
ಅಂದಿನಿಂದ ಇಂದಿನವರೆಗೂ ಮೈಸೂರು ಪಾಕ್ ಭಾರೀ ಪ್ರಸಿದ್ಧಿ ಪಡೆಯಿತು. ಮೈಸೂರಿನಲ್ಲಿ ಈಗಲೂ ಗುರು ಸ್ವೀಟ್ ಮಾರ್ಟ್ ಎಂಬ ಮೈಸೂರಿನ ಪ್ರಸಿದ್ಧ ಸ್ವೀಟ್ ಮಾರ್ಟ್‌ನಲ್ಲಿ ಕಾಕಾಸುರ ಮಾದಪ್ಪ ಅವರ ವಂಶಜರು, ಮೈಸೂರು ಪಾಕ್ ಸೇರಿ ಹಲವು ಸಿಹಿ ತಿಂಡಿ ಮಾಡಿ, ಮಾರುತ್ತಿದ್ದಾರೆ.