ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿವೆ. ರಾಜಕಾರಣಿಗಳು, ಸಿನಿತಾರೆಯರು ಅಥವಾ ಸಾಮಾನ್ಯ ಜನರ ವಿಡಿಯೋಗಳು ಕೂಡ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡುತ್ತಿವೆ. ಆದರೆ ನೀವು ನೋಡುತ್ತಿರುವ ಆ ವಿಡಿಯೋ ನಿಜವೋ ಅಥವಾ ನಕಲಿಯೋ ಎಂದು ನೀವು ಯೋಚಿಸಿದ್ದೀರಾ? ಈಗ ಕಾಲ ಬದಲಾಗಿದೆ — AI ತಂತ್ರಜ್ಞಾನ ಬಳಸಿ ನಕಲಿ ವಿಡಿಯೋಗಳು ಅಥವಾ ಡೀಪ್‌ಫೇಕ್‌ಗಳನ್ನು ರಚಿಸುವುದು ತುಂಬಾ ಸುಲಭವಾಗಿದೆ. ಈ ವಿಡಿಯೋಗಳು ಅಷ್ಟು ನೈಜವಾಗಿ ಕಾಣುತ್ತವೆ ಎಂದರೆ ಸಾಮಾನ್ಯ ವ್ಯಕ್ತಿಗೆ ನಿಜ-ನಕಲಿ ನಡುವೆ ವ್ಯತ್ಯಾಸ ಗೊತ್ತಾಗುವುದೇ ಕಷ್ಟ
ಆದ್ರೆ ಸ್ವಲ್ಪ ಗಮನಿಸಿದರೆ, ನಕಲಿ ವಿಡಿಯೋವನ್ನು ಗುರುತಿಸಲು ಕೆಲವು ಸುಳಿವುಗಳು ಇವೆ. ಉದಾಹರಣೆಗೆ, ಮುಖದ ಚಲನವಲನಗಳು ಸ್ವಲ್ಪ ಅಸಹಜವಾಗಿ ಕಾಣುತ್ತವೆ — ತುಟಿ ಚಲನೆಗಳು ಧ್ವನಿಗೆ ಹೊಂದಿಕೊಳ್ಳುವುದಿಲ್ಲ, ಕಣ್ಣಿನ ಚಲನೆಗಳು ವಿಚಿತ್ರವಾಗಿರುತ್ತವೆ. ಇನ್ನೊಂದು ದೊಡ್ಡ ಸುಳಿವು ಎಂದರೆ ಮುಖದ ಮೇಲೆ ಬರುವ ಬೆಳಕು ಮತ್ತು ನೆರಳು. ಮೂಲ ವಿಡಿಯೋದಲ್ಲಿ ಬೆಳಕು ನೈಸರ್ಗಿಕವಾಗಿ ಬೀಳುತ್ತದೆ, ಆದರೆ ಡೀಪ್‌ಫೇಕ್‌ನಲ್ಲಿ ಅದು ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಹೀಗಾಗಿ ನೀವು ನೋಡುತ್ತಿರುವ ವಿಡಿಯೋದಲ್ಲಿ ಈ ರೀತಿಯ ಅಸಮಾನತೆ ಇದ್ದರೆ, ಎಚ್ಚರವಾಗಿರಿ…
ಇನ್ನೊಂದು ಉಪಾಯ — ವಿಡಿಯೋ ಫ್ರೇಮ್‌ನ್ನು ಪಾಸ್ ಮಾಡಿ ಗಮನದಿಂದ ನೋಡುವುದು. ಫ್ರೇಮ್‌ನ್ನು ಹತ್ತಿರದಿಂದ ನೋಡಿದರೆ ಮುಖದ ಸುತ್ತಲಿನ ಅಂಚು, ಕೂದಲು ಅಥವಾ ಬ್ಯಾಕ್‌ಗ್ರೌಂಡ್‌ನಲ್ಲಿ ಮಸುಕು ಅಥವಾ ವಿಚಿತ್ರ ದೋಷಗಳು ಕಾಣಿಸಬಹುದು. ಅದೇ ರೀತಿ, ಆಡಿಯೋ ಕೂಡ ಗಮನಿಸಬೇಕು. ಡೀಪ್‌ಫೇಕ್‌ಗಳಲ್ಲಿ ಧ್ವನಿ ಸ್ವಲ್ಪ ಯಾಂತ್ರಿಕವಾಗಿ ಅಥವಾ ಭಾವನೆಗಳಿಲ್ಲದಂತೆ ಕೇಳಿಸಬಹುದು. ನೈಜ ವಿಡಿಯೋಗಳಲ್ಲಿ ಧ್ವನಿಯಲ್ಲಿನ ಭಾವನೆಗಳು ನೈಸರ್ಗಿಕವಾಗಿರುತ್ತವೆ, ಆದರೆ ನಕಲಿಯಲ್ಲಿ ಅದು ಕಾಣುವುದಿಲ್ಲ.
ನೀವು ವೈರಲ್ ವಿಡಿಯೋ ನಿಜವೋ ಎಂದು ಪರೀಕ್ಷಿಸಬೇಕಾದರೆ, ಗೂಗಲ್ ಲೆನ್ಸ್ ಅಥವಾ InVID ಎಂಬ ಪರಿಕರಗಳನ್ನು ಬಳಸಬಹುದು. ಇವು ವಿಡಿಯೋ ಫ್ರೇಮ್‌ನಿಂದ ಮೂಲವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಈಗ ಹಲವಾರು ವೆಬ್‌ಸೈಟ್‌ಗಳು AI ಅಥವಾ ಡೀಪ್‌ಫೇಕ್ ಪತ್ತೆ ಮಾಡಲು ಸಹ ಸಹಾಯ ಮಾಡುತ್ತಿವೆ. ಬಹಳ ಬಾರಿ ಈ ವಿಡಿಯೋಗಳು ಕೇವಲ 10 ಸೆಕೆಂಡುಗಳಷ್ಟೇ ಇರುತ್ತವೆ ಮತ್ತು ಕೆಲವೊಮ್ಮೆ ಆಪ್‌ನ ವಾಟರ್‌ಮಾರ್ಕ್ ಅಥವಾ ಲೋಗೋ ಸಹ ಇರುತ್ತದೆ. ಅದನ್ನು ಎಡಿಟ್ ಮಾಡಿ ಹಂಚಿಕೊಳ್ಳುವವರು ಬಹಳ ಮಂದಿ. ಆದ್ದರಿಂದ, ನೀವು ನೋಡುವ ಪ್ರತಿಯೊಂದು ವಿಡಿಯೋ ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ — ಏಕೆಂದರೆ ಇಂದಿನ ಜಗತ್ತಿನಲ್ಲಿ, ನೀವು ನೋಡುವುದು ಯಾವಾಗಲೂ ನಿಜವಾಗಿರೋದಿಲ್ಲ.
ಗಾಯತ್ರಿ ಗುಬ್ಬಿ

