ಮಂಡ್ಯ ಜಿಲ್ಲೆಯಲ್ಲಿ ಈಗ ಹೊಸ ರಾಜಕೀಯ ಚರ್ಚೆ ಕಾವು ಜೋರಾಗಿದೆ. ರಾಜ್ಯದ ರಾಜಕೀಯ ವಲಯದಲ್ಲಿ ಸಿಎಂ ಬದಲಾವಣೆ ಕುರಿತು ಗಾಳಿ ಸುದ್ದಿ ಗದ್ದಲ ಸೃಷ್ಟಿಸುತ್ತಿರುವ ನಡುವೆ, ದಲಿತ ಮುಖ್ಯಮಂತ್ರಿ ಬೇಕು ಎಂಬ ಕೂಗು ಮತ್ತೊಮ್ಮೆ ಜೋರಾಗಿದೆ.
ಮಂಡ್ಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ವೆಂಕಟಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಿಂಗಳ 21ಕ್ಕೆ ಮುಖ್ಯಮಂತ್ರಿ ಬದಲಾವಣೆ ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ನಿಜವಾಗಿಯೂ ಬದಲಾವಣೆ ಆಗುತ್ತಿದ್ರೆ, ಈ ಬಾರಿ ಅವಕಾಶ ದಲಿತ ಸಮುದಾಯಕ್ಕೆ ಸಿಗಬೇಕು ಎಂದು ಅವರು ಸ್ಪಷ್ಟವಾಗಿ ಆಗ್ರಹಿಸಿದ್ದಾರೆ.
ದಲಿತ ಸಂಘಟನೆಗಳು ಒಟ್ಟಾಗಿ ನಿಂತು ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಿವೆ. ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡುವ ಕಾಲ ಬಂದಿದೆ. ನಾವು ಕೇವಲ ಮತದಾರರಲ್ಲ, ಸಿಎಂ ಆಗುವ ಹಕ್ಕು ಹೊಂದಿರುವವರು ಎಂದು ಸಂಘಟನೆಯ ಮುಖಂಡರು ಘೋಷಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ ಅಥವಾ ಸತೀಶ್ ಜಾರಕಿ ಹೊಳಿ – ಇವರಲ್ಲಿ ಯಾರಾದರೂ ಒಬ್ಬರಿಗೆ ಮುಖ್ಯಮಂತ್ರಿಪದ ನೀಡಬೇಕು. ಇದು ದಲಿತರ ಹಕ್ಕಿನ ಪ್ರಶ್ನೆ, ದಯೆಯಲ್ಲ ಎಂದು ಎಚ್ಚರಿಸಿದರು.
ಈ ಬಾರಿ ದಲಿತರಿಗೆ ಅವಕಾಶ ನೀಡದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಇದು ನಮ್ಮ ಅಂತಿಮ ಎಚ್ಚರಿಕೆ. ಮಂಡ್ಯದಿಂದ ಪ್ರಾರಂಭವಾದ ಈ ದಲಿತ ಸಿಎಂ ಕೂಗು ಈಗ ರಾಜ್ಯದ ರಾಜಕೀಯ ವಲಯದ ಕೇಂದ್ರಬಿಂದುವಾಗುತ್ತಿದೆ. ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ, ದಲಿತ ಸಮುದಾಯದ ಆಗ್ರಹ ಹೊಸ ರಾಜಕೀಯ ತಿರುಗುಹುಳಿಗೆ ವೇದಿಕೆಯಾದಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




