www.karnatakatv.net : ಹುಬ್ಬಳ್ಳಿ: ಹುಬ್ಬಳ್ಳಿ ನನ್ನ ಪ್ರೀತಿಯ ಊರು, ನನ್ನ ಎಲ್ಲ ಶಿಕ್ಷಣ ಇಲ್ಲಿಯೇ ಮುಗಿದಿದೆ. ಮುಖ್ಯಮಂತ್ರಿಯಾಗಿ ನಾನು ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ರಾಜ್ಯದ ಎರಡನೇ ಅತಿದೊಡ್ಡ ನಗರ ಹುಬ್ಬಳ್ಳಿ ಧಾರವಾಡವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸುತ್ತೇನೆ. ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಇಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಜಗದೀಶ್ ಶೆಟ್ಟರ್ ಸಂಪುಟ ಸೇರುವುದಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ್ ಶೆಟ್ಟರ್ ಜೊತೆ ಪೋನ್ ನಲ್ಲಿ ಮಾತನಾಡಿದ್ದೇನೆ. ಅವರ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರನ್ನು ಖುದ್ದಾಗಿ ಭೇಟಿಯಾಗಿ ಮಾತನಾಡುವೆ. ಜಗದೀಶ್ ಶೆಟ್ಟರ್ ನಾನು ಆತ್ಮೀಯ ಸ್ನೇಹಿತರು, ಬೇರೆ ಪಕ್ಷದಲ್ಲಿ ಇದ್ದಾಗಲೂ ಉತ್ತಮ ಬಾಂಧವ್ಯ ಇದೆ. ನಾವು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ, ಆಗಿನಿಂದಲೂ ಒಳ್ಳೆಯ ಸ್ನೇಹಿತರು ಎಂದು ಅವರು ಹೇಳಿದರು.
ಇನ್ನೂ ಸಚಿವ ಸಂಪುಟದ ರಚನೆಯ ಬಗ್ಗೆ ಮಾತನಾಡಿದ ಅವರು, ನಾಳೆ ನಾನು ದೆಹಲಿಗೆ ಹೊರಟಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ ಹಾಗೂ ಅಮಿತ್ ಷಾ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಮೊದಲ ಬಾರಿಗೆ ಹೋಗುತ್ತಿದ್ದೇನೆ ಅವರ ಆಶೀರ್ವಾದ ಪಡೆದು ಬಳಿಕ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಮೂರು ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ ಎಂದರು.