ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಮೊಬೈಲ್ ಕಮಾಂಡ್ ಪೋಸ್ಟ್ ವಾಹನವನ್ನು ಪರಿಚಯಿಸಲಾಗಿದೆ. ವಿಮಾನ ಅಪಘಾತ, ಅಪಹರಣ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ತ್ವರಿತ ನಿರ್ಧಾರ ಮತ್ತು ಸಮನ್ವಯ ಕಾರ್ಯಾಚರಣೆಗೆ ಈ ವಾಹನ ಪ್ರಮುಖ ಪಾತ್ರವಹಿಸಲಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ವ್ಯಾಪ್ತಿಯ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ಮೊಬೈಲ್ ಕಮಾಂಡ್ ಪೋಸ್ಟ್ ಹೊಂದಿರುವ ಮೊದಲ ನಿಲ್ದಾಣವಾಗಿ ಹುಬ್ಬಳ್ಳಿ ಗುರುತಿಸಿಕೊಂಡಿದೆ. ಪ್ರಯಾಣಿಕರ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲೇ ಈ ಸೌಲಭ್ಯವನ್ನು ಇಲ್ಲಿ ಒದಗಿಸಲಾಗಿದೆ.
ಈ ವಾಹನದೊಳಗೆ ಮಿನಿ ಮೀಟಿಂಗ್ ಹಾಲ್ ವ್ಯವಸ್ಥೆ ಇದ್ದು, 8 ರಿಂದ 10 ಅಧಿಕಾರಿಗಳು ಒಂದೇ ವೇಳೆ ಸಭೆ ನಡೆಸುವ ಅವಕಾಶವಿದೆ. ತುರ್ತು ಪರಿಸ್ಥಿತಿಯಲ್ಲಿ ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯಕವಾಗಲಿದೆ. ಜೊತೆಗೆ ಏರ್ ಟ್ರಾಫಿಕ್ ಕಂಟ್ರೋಲ್, ಅಗ್ನಿಶಾಮಕ ದಳ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ನೇರ ಸಂಪರ್ಕ ಸಾಧಿಸಲು ವಿಹೆಚ್‌ಎಫ್ ಹಾಗೂ ಯುಹೆಚ್‌ಎಫ್ ಸಂವಹನ ವ್ಯವಸ್ಥೆ ಅಳವಡಿಸಲಾಗಿದೆ.
ಇದಲ್ಲದೆ ಸ್ಯಾಟ್‌ಲೈಟ್ ಲಿಂಕ್, ಹೈ-ಸ್ಪೀಡ್ ವೈ-ಫೈ, ದೊಡ್ಡ ವಿಡಿಯೋ ವಾಲ್ ಹಾಗೂ ಮಲ್ಟಿಪಲ್ ಮಾನಿಟರ್‌ಗಳ ವ್ಯವಸ್ಥೆಯೂ ಇದ್ದು, ಸಿಸಿಟಿವಿ ಮತ್ತು ಡ್ರೋನ್ ದೃಶ್ಯಗಳನ್ನು ನೇರವಾಗಿ ವೀಕ್ಷಿಸುವ ಸೌಲಭ್ಯವೂ ಲಭ್ಯವಿದೆ. ತುರ್ತು ಸಂದರ್ಭಗಳ ನಿರ್ವಹಣೆಯಲ್ಲಿ ಇದು ಮಹತ್ವದ ತಾಂತ್ರಿಕ ಸಹಾಯವಾಗಲಿದೆ.




