ಹುಬ್ಬಳ್ಳಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳ ಟ್ರಯಾಂಗಲ್ ಲವ್ ಸ್ಟೋರಿ ರಕ್ತಪಾತಕ್ಕೆ ಕಾರಣವಾಗಿದೆ. ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಸ್ನೇಹಿತರ ನಡುವಿನ ಕಲಹ ಉಂಟಾಗಿದೆ. ಬರ್ತ್‌ಡೇ ಪಾರ್ಟಿಯಲ್ಲೇ ಚಾಕು ಇರಿತದ ರೂಪ ಪಡೆದುಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಮುಖ ಆರೋಪಿ ಮಣಿಕಂಠ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಗಾಯಾಳುಗಳಾದ ಅಭಿಷೇಕ್ ಬಂಡಿವಂಡರ್ ಮತ್ತು ಮಾರುತಿ ಬಂಡಿವಂಡರ್ ಇಬ್ಬರೂ ದೇಶಪಾಂಡೆ ನಗರದ ನಿವಾಸಿಗಳು. ಇಬ್ಬರೂ ಆಟೋ ಚಾಲಕರಾಗಿದ್ದು, ತಮ್ಮ ಸ್ನೇಹಿತ ಪವನ್ ಜೊತೆ ಬರ್ತ್‌ಡೇ ಪಾರ್ಟಿಗೆ ಹೋದ ವೇಳೆ ದಾಳಿಗೆ ಒಳಗಾಗಿದ್ದಾರೆ.
ಪವನ್ ಮತ್ತು ಮಣಿಕಂಠ ಇಬ್ಬರೂ ಗ್ಲೋಬಲ್ ಕಾಲೇಜಿನ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳು. ಇವರಿಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಕಾರಣದಿಂದಾಗಿ ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವಿವಾದವನ್ನು ಬಗೆಹರಿಸಲು ಮಣಿಕಂಠ ತನ್ನ ಬರ್ತ್‌ಡೇ ಪಾರ್ಟಿಗೆ ಪವನ್‌ನ್ನು ಆಹ್ವಾನಿಸಿದ್ದ. ಪವನ್ ತನ್ನ ಸ್ನೇಹಿತರಾದ ಅಭಿಷೇಕ್ ಮತ್ತು ಮಾರುತಿ ಜೊತೆ ಪಾರ್ಟಿಗೆ ತೆರಳಿದ್ದರು.
ಆದರೆ ಮಾತುಕತೆ ಬಗೆಹರಿಯುವ ಬದಲು ಗಲಾಟೆಗೆ ತಿರುಗಿದ್ದು, ಮಣಿಕಂಠ ಮತ್ತು ಆತನ ಸ್ನೇಹಿತರು ಪವನ್ ಜೊತೆಗೆ ಬಂದಿದ್ದ ಅಭಿಷೇಕ್ ಮತ್ತು ಮಾರುತಿ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಗಾಯಗೊಂಡ ಇಬ್ಬರನ್ನೂ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಪೊಲೀಸರು ಘಟನೆಯ ತನಿಖೆ ಮುಂದುವರಿಸಿದ್ದು, ಈ ಪ್ರೇಮ ಪ್ರಹಸನ ಕೊನೆಗೆ ರಕ್ತಪಾತದಲ್ಲಿ ಅಂತ್ಯಗೊಂಡಿದೆ. ಕಾಲೇಜಿನಲ್ಲಿ ಓದಿ ಭವಿಷ್ಯ ಕಟ್ಟಬೇಕಾದ ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ಆಸೆಗಾಗಿ ಇದೀಗ ಕಂಬಿ ಹಿಂದೆ ಹೋಗಿರುವುದು ವಿಷಾದನೀಯ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

