Hubli: ಲಕ್ಷ್ಮಣ ಸವದಿಗೆ ನೂತನ ಸಚಿವ ಸಂಪುಟದಲ್ಲಿ ಅರ್ಹ ಸ್ಥಾನ ನೀಡಬೇಕೆಂದು ಒತ್ತಾಯ

Hubli Political News: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸಂಚಲನ ಮೂಡಿದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಅಥಣಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮಹಾ ಒಕ್ಕೂಟದಿಂದ ಬಲವಾದ ಒತ್ತಾಯ ಕೇಳಿಬಂದಿದೆ.

ಉತ್ತರ ಕರ್ನಾಟಕದ ಹಿರಿಯ ಮುತ್ಸದ್ದಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಅರ್ಹ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮಹಾ ಒಕ್ಕೂಟದ ಅಥಣಿ ವಲಯದ ವತಿಯಿಂದ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಸಲಾಯಿತು.

ಒಕ್ಕೂಟದ ವಲಯ ಅಧ್ಯಕ್ಷರಾದ ಶ್ರೀಕಾಂತ ದರೂರ ನೇತೃತ್ವದಲ್ಲಿ ನಡೆದ ಈ ಜಂಟಿ ಸುದ್ದಿಗೋಷ್ಠಿಯಲ್ಲಿ, ಸವದಿಯವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವ ಸಂದರ್ಭದಲ್ಲಿ ಅಂದಿನ ಉಪಮುಖ್ಯಮಂತ್ರಿ (ಪ್ರಸ್ತುತ ಮುಖ್ಯಮಂತ್ರಿ) ಡಿ.ಕೆ.ಶಿವಕುಮಾರ್ ಅವರು ನೀಡಿದ್ದ ಸಚಿವ ಸ್ಥಾನದ ಭರವಸೆಯನ್ನು ಈ ಕೂಡಲೇ ಈಡೇರಿಸಬೇಕು ಎಂದು ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗಳಿಗೆ ನೇರ ಮನವಿ ಸಲ್ಲಿಸಲಾಯಿತು.

ಕೊಟ್ಟ ಮಾತಿನಂತೆ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಭರ್ಜರಿ ಗೆಲುವಿನ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಒಕ್ಕೂಟದ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಈ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕಾ ಒಕ್ಕೂಟದ ಉಪಾಧ್ಯಕ್ಷರಾದ ಸಂಜು ಜಮಖಂಡಿ, ಮುಖಂಡರಾದ ಭುಜಬಲಿ ಹಳ್ಳೂರ, ಖಜಾಂಚಿ ಶ್ರೀಶೈಲ ಕಾಂಬಳೆ, ಕಾರ್ಯದರ್ಶಿ ಸಿದ್ದರಾಮ್ ಬಡಿಗೇರ ಹಾಗೂ ಒಕ್ಕೂಟದ ಪ್ರಮುಖ ಸದಸ್ಯರಾದ ಬಸವರಾಜ್ ಹಣಗಂಡಿ, ಶಂಕ‌ರ್ ನಾಯಿಕ್, ಬೀರಪ್ಪ ಲೋಕು‌ರ್ ಮತ್ತು ಬಸವರಾಜ್ ಜಗದೇವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಬಲ ಬೆಂಬಲ ಸೂಚಿಸಿದರು.

About The Author