Hubli: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಕ್ಕ ಎರಡು ಲಾರಿ ಪಡಿತರ ಅಕ್ಕಿ ಪ್ರಕರಣದಲ್ಲಿ ಮುಖ್ಯ ಆರೋಪಿ ಸಚಿನ್ ಕಬ್ಬೂರ ಸೇರಿ ಒಂಬತ್ತು ಮಂದಿ ಆರೋಪಿಗಳನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಒಂದು ತಿಂಗಳ ಹಿಂದೆ ಹಾವೇರಿಯಿಂದ ಗುಜರಾತ್ ಗೆ ಹುಬ್ಬಳ್ಳಿ ಮಾರ್ಗವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ 49 ಟನ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಸೂಕ್ತ ಮಾಹಿತಿ ಮೇರೆಗೆ ರೇಡ್ ಮಾಡಿದ್ದರು. ಆಗ ಹತ್ತು ಗಾಲಿಯ ಎರಡು ಲಾರಿ ಮತ್ತು 49 ಟನ್ ಅಕ್ಕಿ ಹಾಗೂ ನಾಲ್ಕು ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ, ಮುಖ್ಯ ಆರೋಪಿ ಸಚಿನ್ ಕಬ್ಬೂರ ಮಾತ್ರ ಪೊಲೀಸರ ಕಣ್ತಪ್ಪಿಸಿದ್ದ.
ಬೆಂಡಿಗೇರಿ ಪೊಲೀಸರು ಚುರುಕಾಗಿ ತನಿಖೆ ಆರಂಭ ಮಾಡಿದ್ದು, ಮುಖ್ಯ ಆರೋಪಿ ಸಚಿನ್ ಕಬ್ಬೂರ ಸೇರಿ ಒಂಬತ್ತು ಜನ ಆರೋಪಿಗಳನ್ನು ಅರೆಸ್ಟ್ ಮಾಡಿ, ಕಂಬಿ ಹಿಂದೆ ತಳ್ಳಿದ್ದಾರೆ. ಖದೀಮರು ಹುಬ್ಬಳ್ಳಿಯ ಸುತ್ತಮುತ್ತ ಬಡವರ ಅಕ್ಕಿಗೆ ಕಣ್ಣು ಹಾಕುತ್ತಿದ್ದು, ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಬೇಕಾಗಿದೆ.



