Hubli: NWKRTC ಯ ಚಾಲಕ ಕಂ‌ ನಿರ್ವಾಹಕ ಷಡಕ್ಷರಯ್ಯ ಮನೆ ಲೋಕಾಯುಕ್ತ ರೇಡ್..

Hubli News: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ NWKRTC ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ನಗರ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಷಡಕ್ಷರಯ್ಯ ಅವರ ಲೋಹಿಯಾ ನಗರದ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮನೆಗೆ ಆಗಮಿಸಿ, ಮನೆಯಲ್ಲಿರುವ ದಾಖಲೆಗಳು, ಆಸ್ತಿ ಪತ್ರಗಳು ಹಾಗೂ ಇತರೆ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಷಡಕ್ಷರಯ್ಯ ಅವರ ಆದಾಯ, ಆಸ್ತಿ ಮತ್ತು ಸಂಪಾದನೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ. ದಾಳಿಯ ವೇಳೆ ಏನೆಲ್ಲ ಆಸ್ತಿ ಹಾಗೂ ದಾಖಲೆಗಳು ಪತ್ತೆಯಾಗಲಿವೆ ಎಂಬುದು ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ತಿಳಿದುಬರಬೇಕಿದೆ.

ಸದ್ಯ ಲೋಹಿಯಾ ನಗರದ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ಮುಂದುವರಿದಿದೆ.

About The Author