Hubli News: ಹುಬ್ಬಳ್ಳಿ: ನವನಗರ, ಅಮರಗೋಳ, ಭೈರಿದೇವರಕೊಪ್ಪ, ಎಪಿಎಂಸಿ ಮತ್ತು ಶಾಂತಿನಿಕೇತನ ಕಾಲೋನಿಯ ನಿವಾಸಿಗಳು ಸೇರಿ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ನವನಗರ ಠಾಣೆಯ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ರೌಡಿಶೀಟರ್‌ಗಳು ಹಾಗೂ ಕೊಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಿವಾಸಿಗಳ ಪ್ರಕಾರ, ನವನಗರ ಠಾಣೆಯ ಸಿ.ಪಿ.ಐ. ಸಮೀವುಲ್ಲ ಸಾಹೇಬ್ ಅವರು ಹಾಗೂ ಠಾಣೆಯ ಸಿಬ್ಬಂದಿ ವಿರುದ್ಧ ಕೆಲವು ರೌಡಿಶೀಟರ್‌ಗಳು ಮತ್ತು ಕೊಲೆ ಆರೋಪಿಗಳು ಯಾವುದೇ ಸಾಕ್ಷ್ಯಾಧಾರವಿಲ್ಲದೆ ಲಂಚದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳು ಪೊಲೀಸರ ನಿಷ್ಠಾವಂತ ಕಾರ್ಯದಲ್ಲಿ ಅಡಚಣೆ ಉಂಟುಮಾಡುತ್ತಿದ್ದು, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ನವನಗರ ಪೊಲೀಸರು ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿತನ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ಆರೋಪಿಗಳು ಪೊಲೀಸರು ವಿರುದ್ಧ ದುಷ್ಪ್ರಚಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಲಂಚದ ಆರೋಪಗಳನ್ನು ಹರಿಬಿಡುತ್ತಿದ್ದು, ಕೆಲವು ವ್ಯಕ್ತಿಗಳು ಅದಕ್ಕೆ ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ನಿವಾಸಿಗಳು ನವನಗರ ಪೊಲೀಸ್ ಠಾಣೆಯ ಅಪರಾಧ ನಂ. 37/2025ರ ಪ್ರಕರಣದ ಆರೋಪಿಯ ಜಾಮೀನು ರದ್ದುಗೊಳಿಸುವಂತೆ ಹಾಗೂ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರನ್ನು ವಿನಂತಿಸಿದ್ದಾರೆ.