Hubli News: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ

Hubli News: ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಯಲ್ಲಿ ನಿರಂತರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಮತ್ತೆ ಕೇಳಿಬಂದಿದೆ. ಹುಬ್ಬಳ್ಳಿಯಲ್ಲಿ ಕಲ್ಯಾಣ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಮೌನ ಪ್ರತಿಭಟನೆ ನಡೆಸಿ, 16 ಜಿಲ್ಲೆಗಳಾದ್ಯಂತ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕಲ್ಯಾಣ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿ, ಕೈಗಾರಿಕೆ, ನೀರಾವರಿ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ನಿರಂತರ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯದ ಇತರೆ ಭಾಗಗಳಿಗೆ ಹೊಸ ಯೋಜನೆಗಳು, ಟೌನ್‌ಶಿಪ್‌ಗಳು ಹಾಗೂ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಲಾಗುತ್ತಿದೆ. ಆದರೆ ಉತ್ತರ ಕರ್ನಾಟಕ ಮಾತ್ರ ಮೂಲಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಅನ್ಯಾಯಕ್ಕೆ ಅಂತ್ಯ ಹಾಡಬೇಕಾದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವೇ ಪರಿಹಾರ ಎಂದು ಹೋರಾಟಗಾರರು ಒತ್ತಾಯಿಸಿದರು.

ಇದು ಕೇವಲ ಆರಂಭಿಕ ಹೋರಾಟ ಮಾತ್ರ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲೂ ಮನೆ-ಮನೆಗೆ ತೆರಳಿ ಜನಜಾಗೃತಿ ಮೂಡಿಸಲಾಗುವುದು. ಪ್ರತ್ಯೇಕ ರಾಜ್ಯದ ಪರ ಜನಬೆಂಬಲ ಸಂಘಟಿಸಿ ಹೋರಾಟವನ್ನು ರಾಜ್ಯವ್ಯಾಪಿ ರೂಪದಲ್ಲಿ ತೀವ್ರಗೊಳಿಸುವುದಾಗಿ ಹೋರಾಟ ಸಮಿತಿ ಘೋಷಿಸಿದೆ. ಒಟ್ಟಾರೆ, ಅಭಿವೃದ್ಧಿ ಅಸಮಾನತೆ ಪ್ರಶ್ನೆಯೊಂದಿಗೆ ಮತ್ತೊಮ್ಮೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಮುನ್ನೆಲೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ರಾಜಕೀಯವಾಗಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author