Hubli News: ಪೇಂಟ್ ಬಕೇಟ್ ಸ್ಟಾಕ್ ಕಡಿಮೆ ಮಾಡಿ ಮೋಸ; ನಾಲ್ವರ ವಿರುದ್ಧ ದೂರು

Hubli News: ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 153 ಪೇಂಟ್ ಬಕೇಟ್‌ಗಳ ಸ್ಟಾಕ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಬರ್ಜರ್ ಪೇಂಟ್ಸ್ ಕಂಪನಿಯ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ವ್ಯಾಪ್ತಿಯ ಕುಂದಗೋಳ ಕ್ರಾಸ್ ಸಮೀಪದ ಎಟಿಸಿ ಗೋಡೌನ್ ಹಿಂಭಾಗದಲ್ಲಿರುವ ಬರ್ಜರ್ ಪೇಂಟ್ಸ್ ಗೋಡೌನ್‌ನಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 153 ಪೇಂಟ್ ಬಕೇಟ್‌ಗಳ ಸ್ಟಾಕ್‌ನಲ್ಲಿ ಕೊರತೆ ಕಂಡುಬಂದಿದ್ದು, ಈ ಸಂಬಂಧ ಕಂಪನಿಯ ಅಧಿಕಾರಿಗಳು ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

ಗೋಡೌನ್‌ನಲ್ಲಿ ಸಂಗ್ರಹಿಸಲಾಗಿದ್ದ ಪೇಂಟ್ ಬಕೇಟ್‌ಗಳನ್ನು ಎಲ್ಲಿಗೋ ಸಾಗಿಸಿರಬಹುದು ಅಥವಾ ಅನಧಿಕೃತವಾಗಿ ಮಾರಾಟ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಇದರಿಂದ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೋಡೌನ್ ಮ್ಯಾನೇಜರ್ ರವಿಕೃಷ್ಣಗೌಡ ಹಾಗೂ ಸೂಪರ್‌ವೈಸರ್‌ಗಳಾದ ರಾಜು, ನಾಗರಾಜ ಮತ್ತು ರಾಜಪ್ಪ ಅವರು ಸ್ಟಾಕ್ ಕಡಿಮೆಯಾಗುವಂತೆ ಮಾಡಿ ಕಂಪನಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಟಾಕ್ ಪರಿಶೀಲನೆ ವೇಳೆ ವ್ಯತ್ಯಾಸ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಂಪನಿಯವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

About The Author