Hubli News: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ಮನೆ ಬಾಗಿಲಿಗೇ ಕಸವೂ ಬೀಳತ್ತೆ, ದಂಡವೂ ಬೀಳತ್ತೆ..

Hubli News: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕಸ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಬಾಗಿಲಿಗೇ ಕಸ ಸುರಿದು, ದಂಡ ವಿಧಿಸುವ ವಿನೂತನ ಅಭಿಯಾನವನ್ನು ಪಾಲಿಕೆ ಆರಂಭಿಸಿದೆ.

ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಕಠಿಣ ಕ್ರಮ ಜಾರಿಗೊಳಿಸಿದೆ. ರಸ್ತೆ ಬದಿ, ಖಾಲಿ ಜಾಗ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆದು ಪರಿಸರ ಹಾಳು ಮಾಡುವವರನ್ನು ಗುರುತಿಸಿ, ಅವರು ಎಸೆದ ಕಸವನ್ನೇ ಅವರ ಮನೆ ಬಾಗಿಲಿಗೆ ತಂದು ಸುರಿಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಈಗಾಗಲೇ ಧಾರವಾಡದಲ್ಲಿ ನಾಲ್ವರು ನಿವಾಸಿಗಳ ಮನೆ ಎದುರು ಕಸ ಸುರಿದು, ಸುಮಾರು 16 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಹುಬ್ಬಳ್ಳಿಯಲ್ಲೂ ಇಂತಹವರ ವಿರುದ್ಧ ನಿಗಾ ವಹಿಸಲಾಗಿದ್ದು, ಕಸ ಎಸೆಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರ ಮಾಹಿತಿ, ಕಸದಲ್ಲಿ ಸಿಗುವ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಪ್ಪಿತಸ್ಥರನ್ನು ಗುರುತಿಸಲಾಗುತ್ತಿದೆ.

ಮನೆ ನಿರ್ಮಾಣ ತ್ಯಾಜ್ಯ, ಕಚ್ಚಾ ತ್ಯಾಜ್ಯ ಹಾಗೂ ಇತರೆ ಕಸವನ್ನು ರಸ್ತೆ ಬದಿಯಲ್ಲಿ ಸುರಿಯುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಬಾರಿ 5 ಸಾವಿರ ರೂಪಾಯಿ, ಎರಡನೇ ಬಾರಿ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಮೂರನೇ ಬಾರಿ ವಾಹನ ವಶಪಡಿಸಿಕೊಳ್ಳುವುದರ ಜೊತೆಗೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

ಇನ್ನು ಮುಂದೆ ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವುದು ಕಡ್ಡಾಯವಾಗಿದೆ. ನಗರದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ 114 ಸಿಸಿಟಿವಿ ಕ್ಯಾಮರಾಗಳ ಮೂಲಕ ನಿರಂತರ ನಿಗಾವಹಿಸಲಾಗುತ್ತಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

About The Author