Hubli News: ಸರ್ಕಾರವೇ ಅಧಿಕೃತವಾಗಿ ರಜೆ ಘೋಷಣೆ ಮಾಡಿದ್ದರೂ, ವಿದ್ಯಾರ್ಥಿಗಳಿಗೆ ರಜೆ ನೀಡದ ಖಾಸಗಿ ಶಾಲೆಗಳ ವಿರುದ್ಧ ಶ್ರೀರಾಮಸೇನೆ ಅಖಾಡಕ್ಕಿಳಿದಿದೆ..! ಹುಬ್ಬಳ್ಳಿಯಲ್ಲಿ ಖಾಸಗಿ ಶಾಲೆಗಳಿಗೆ ಮುತ್ತಿಗೆ ಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು, ತರಗತಿಗಳಲ್ಲಿದ್ದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ, ಖಾಸಗಿ ಶಾಲೆಗಳ ವಿರುದ್ಧ ಶ್ರೀರಾಮಸೇನೆ ಕೆಂಡಕಾರಿದ್ದೇಕೆ..? ಇಲ್ಲಿದೆ ವರದಿ.
ಸರ್ಕಾರದ ರಜೆ ಘೋಷಣೆ..!
ಆದರೆ ಖಾಸಗಿ ಶಾಲೆಗಳಲ್ಲಿ ಮಾತ್ರ ತರಗತಿಗಳು ಎಂದಿನಂತೆ ನಡೆಯುತ್ತಿವೆ ಎಂಬ ಆರೋಪ..!
ಇದರಿಂದ ಕೆರಳಿದ ಶ್ರೀರಾಮಸೇನೆ ಕಾರ್ಯಕರ್ತರು ನೇರವಾಗಿ ಶಾಲೆಗಳ ಅಂಗಳಕ್ಕೇ ಎಂಟ್ರಿ ಕೊಟ್ಟಿದ್ದಾರೆ..!
ಹುಬ್ಬಳ್ಳಿಯಲ್ಲಿ ಸರ್ಕಾರದ ಅಧಿಕೃತ ರಜೆ ಘೋಷಣೆಯಿದ್ದರೂ ವಿದ್ಯಾರ್ಥಿಗಳಿಗೆ ರಜೆ ನೀಡಿಲ್ಲ ಎಂದು ಆರೋಪಿಸಿ, ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಖಾಸಗಿ ಶಾಲೆಗಳಿಗೆ ಮುತ್ತಿಗೆ ಹಾಕಿದ್ದಾರೆ. ಶಾಲೆಯೊಳಗೆ ತೆರಳಿದ ಕಾರ್ಯಕರ್ತರು, ತರಗತಿಗಳಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ.
ನಾಡಹಬ್ಬ ದಸರಾ ಮತ್ತು ಹಿಂದೂಗಳ ಹಬ್ಬಕ್ಕೆ ಸರ್ಕಾರವೇ ರಜೆ ಘೋಷಣೆ ಮಾಡಿದ್ದರೂ, ಕೆಲವು ಖಾಸಗಿ ಶಾಲೆಗಳು ರಜೆ ನೀಡಿಲ್ಲ ಎಂಬುದು ಶ್ರೀರಾಮಸೇನೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಗಳಿಗೆ ರಜೆ ನೀಡುವಂತೆ ತಾಕೀತು ಮಾಡಿದ್ದು, ಇಂದಿನಿಂದ ರಜೆ ನೀಡುವಂತೆ ಸೂಚಿಸಲಾಗಿದೆ ಎಂದು ಶ್ರೀರಾಮಸೇನೆ ಹೇಳಿದೆ.
“ಹುಬ್ಬಳ್ಳಿಯ ಕೆಲವು ಖಾಸಗಿ ಶಾಲೆಗಳು ಕ್ರಿಶ್ಚಿಯನ್ ಮನೋಭಾವ ಹೊಂದಿವೆ. ನಾಡಹಬ್ಬ ದಸರಾ ಹಿಂದೂಗಳ ಹಬ್ಬ. ಸರ್ಕಾರವೇ ರಜೆ ಘೋಷಣೆ ಮಾಡಿದೆ. ಆದರೂ ಕೆಲವು ಖಾಸಗಿ ಶಾಲೆಗಳು ರಜೆ ನೀಡಿಲ್ಲ. ಅವರಿಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಬೇಕಿಲ್ಲವೇ? ಹೀಗಾಗಿ ಶ್ರೀರಾಮಸೇನೆ ಈ ಕಾರ್ಯಕ್ಕೆ ಮುಂದಾಗಿದೆ. ಶಾಲಾ ಆಡಳಿತ ಮಂಡಳಿಗಳಿಗೆ ಬುದ್ಧಿ ಹೇಳಿ, ಇಂದಿನಿಂದ ರಜೆ ನೀಡುವಂತೆ ಮಾಡಿದ್ದೇವೆ.”
ಒಂದೆಡೆ ಸರ್ಕಾರದ ರಜೆ ಘೋಷಣೆಯಿದ್ದರೂ ಶಾಲೆಗಳು ಪಾಲಿಸಿಲ್ಲ ಎಂಬ ಆರೋಪ, ಮತ್ತೊಂದೆಡೆ ಶಾಲೆಗಳಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಶ್ರೀರಾಮಸೇನೆ ಕಾರ್ಯಕರ್ತರು. ಸರ್ಕಾರದ ಆದೇಶ ಪಾಲನೆಯ ವಿಚಾರ ಈಗ ಹುಬ್ಬಳ್ಳಿಯಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿಕ್ರಿಯೆ ಏನು ಎಂಬುದು ತಿಳಿದುಬರಬೇಕಿದೆ.




