Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಇಂದು ಗಣಪತಿ ಪ್ರತಿಷ್ಠಾಪನೆ ಮಾಡಿದ್ದು, ಇಡೀ ರಾಣಿ ಚನ್ನಮ್ಮ ಉತ್ಸವ ಮಹಾಮಂಡಳಿ ವಿಘ್ನೇಶ್ವರನನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡು, ಬಾಲಕೃಷ್ಣ ಗಣಪತಿಯನ್ನು ಸಕಲ ವಾದ್ಯಮೇಳದೊಂದಿಗೆ ಪ್ರತಿಷ್ಠಾಪನೆ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿಎಸ್‌ವಿ ಪ್ರಸಾದ್ ಅವರು ವಿಶೇಷ ಪೂಜೆ ಸಲ್ಲಿಸಿದರು.
ನಾಲ್ಕು ವರ್ಷಗಳ ಹಿಂದೆ ಈದ್ಗಾ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂಗಳು ಸಾಕಷ್ಟು ಹೋರಾಟ ಮಾಡಿದ್ದರು. ಅದು ಇಡೀ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮಹಾನಗರ ಪಾಲಿಕೆ ಮೂರು ದಿನಗಳ ಕಾಲ ರಾಣಿ ಚನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ಅನುಮಯ ನೀಡಿದ ಹಿನ್ನೆಲೆಯಲ್ಲಿ, ಉತ್ಸವ ಮಹಾಮಂಡಳಿ ವಿವಿಧ ಅವತಾರದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರು. ಈ ಬಾರಿ ಬಾಲಕೃಷ್ಣನ ರೂಪದಲ್ಲಿ ಗಣಪತಿಯನ್ನು ಇಂದು ಪ್ರತಿಷ್ಠಾಪನೆ ಮಾಡಿದರು. ಈ ಅದ್ಬುತ ಗಳಿಗೆಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜು ಬಡಸ್ಲರ್, ಸ್ವಾಗತ ಸಮೀತಿ ಅಧ್ಯಕ್ಷ ಡಾ. ವಿಎಸ್‌ವಿ ಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಈಗಾಗಲೇ ರಾಣಿ ಚನ್ನಮ್ಮ ಮೈದಾನದ ಗಣಪತಿ ನೋಡಲು ಬೆಳಗ್ಗೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ.