Hubli News: ಹಣಕಾಸಿನ ವ್ಯವಹಾರಕ್ಕೆ ವ್ಯಕ್ತಿ ಅಪಹರಣ: ಎರಡೇ ಗಂಟೆಯಲ್ಲಿ ಆರೋಪಿಗಳ ಬಂಧನ

Hubli News: ಹಣಕಾಸಿನ ವ್ಯವಹಾರದ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಅಪಹರಣ ಮಾಡಿದ ಘಟನೆ ಹುಬ್ಬಳ್ಳಿಯ ತೋಳನಕೆರೆ ಬಳಿ ನಡೆದಿದೆ. ಅಪಹರಣದ ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೇವಲ ಎರಡು ಗಂಟೆಯಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಫೋಟೋಗಳು ಕರ್ನಾಟಕ ಟಿವಿಗೆ ಲಭ್ಯವಾಗಿವೆ.

ಹಣಕಾಸಿನ ವ್ಯವಹಾರದ ಜಗಳ ವ್ಯಕ್ತಿಯ ಅಪಹರಣದವರೆಗೂ ತಲುಪಿದೆ. ಹುಬ್ಬಳ್ಳಿಯ ತೋಳನಕೆರೆ ಬಳಿ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಹುಬ್ಬಳ್ಳಿಯ ಎಕ್ಸೈಜ್ ಕಾಲೋನಿ ನಿವಾಸಿ ಸುರೇಶ್ ಪೂಜಾರಿ ಎಂಬುವವರನ್ನು ಇಬ್ಬರು ಆರೋಪಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ಶೇರ್ ಮಾರ್ಕೆಟ್‌ನಲ್ಲಿ ಟ್ರೇಡಿಂಗ್‌ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಹಣ ನೀಡಿಲ್ಲ ಎಂಬ ವಿಚಾರಕ್ಕೆ ಸುರೇಶ್ ಪೂಜಾರಿಯನ್ನು ಅಪಹರಿಸಿರುವ ಆರೋಪ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಗೋಕುಲ್ ರೋಡ್ ಠಾಣೆ ಪೊಲೀಸರು ಕೇವಲ ಎರಡು ಗಂಟೆಯಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಶಿವಕುಮಾರ ಹಿರೇಮಠ ಹಾಗೂ ಮಂಜುನಾಥ ಕರಡಿ ಬಂಧಿತ ಆರೋಪಿಗಳು.

ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 183/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 126(2), 137(2), 352 ಹಾಗೂ ಸಹಕಲಂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇನ್ನು ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಫೋಟೋಗಳು ಕರ್ನಾಟಕ ಟಿವಿಗೆ ಲಭ್ಯವಾಗಿವೆ. ಹಣಕಾಸಿನ ವ್ಯವಹಾರದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

About The Author