Hubli News: ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಪಕ್ಷೇತರರಿಗೆ ಮೇಯರ್‌ಗಿರಿ?

Hubli News: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಬಾರಿ ಮೇಯರ್ ಸ್ಥಾನ ಪಕ್ಷೇತರ ಸದಸ್ಯರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಮೀಸಲಾತಿ ಲೆಕ್ಕಾಚಾರದಿಂದ ಬಿಜೆಪಿ ಪಕ್ಷೇತರ ಸದಸ್ಯರನ್ನೇ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಇದೇ ತಿಂಗಳ 30ರಂದು ಮುಕ್ತಾಯವಾಗಲಿದ್ದು, ಜುಲೈ 3 ಅಥವಾ 4ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಾರಿ ಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಎಸ್‌ಸಿ ಮಹಿಳಾ ಸದಸ್ಯರಿಲ್ಲದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

56ನೇ ವಾರ್ಡ್‌ನ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ ಅವರು ಎಸ್‌ಸಿ ವರ್ಗಕ್ಕೆ ಸೇರಿದ ಪಕ್ಷೇತರ ಸದಸ್ಯರಾಗಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಬಳಿಕ ಬಿಜೆಪಿಗೆ ಬೆಂಬಲ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕಾಗಿ ಚಂದ್ರಿಕಾ ಮೇಸ್ತ್ರಿ ಹಾಗೂ ದುರ್ಗಮ್ಮ ಬಿಜವಾಡ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇಬ್ಬರಲ್ಲಿ ಒಬ್ಬರಿಗೆ ಮೇಯರ್ ಪಟ್ಟ ಒಲಿಯುವ ಸಾಧ್ಯತೆ ಹೆಚ್ಚಾಗಿದೆ. ಮೀಸಲಾತಿಯ ಲೆಕ್ಕಾಚಾರದಿಂದ ಬಿಜೆಪಿ ಪಕ್ಷೇತರ ಸದಸ್ಯರಿಗೆ ಮಣೆ ಹಾಕುವುದು ಬಹುತೇಕ ಅನಿವಾರ್ಯವಾಗಿದ್ದು, ಪಕ್ಷೇತರರೊಬ್ಬರು ಮೇಯರ್ ಆಗುವ ಸಾಧ್ಯತೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಒಟ್ಟಾರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಯಾರು ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷೇತರ ಸದಸ್ಯರೊಬ್ಬರು ನಗರದ ಪ್ರಥಮ ಪ್ರಜೆಯಾಗುವ ಸಾಧ್ಯತೆ ಹೆಚ್ಚಾಗಿದೆ.

About The Author