Hubli News: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ನಿರಂತರ ಲೈಂಗಿಕ ದೌರ್ಜನ್ಯ ಶಂಕೆ

Hubli News: ಹುಬ್ಬಳ್ಳಿಯಲ್ಲಿ 14 ವರ್ಷದ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಪ್ರಾಪ್ತೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

14 ವರ್ಷ 3 ತಿಂಗಳ ಅಪ್ರಾಪ್ತೆ ಜುಲೈ 8ರಂದು ರಕ್ತಸ್ರಾವದ ಹಿನ್ನೆಲೆ ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆಯಾಗಿದ್ದಳು. ಮನೆಯಲ್ಲಿ ಹೆರಿಗೆ ನಡೆದಿದ್ದ ಹಿನ್ನೆಲೆ, ಅಪ್ರಾಪ್ತೆಯಾಗಿದ್ದ ಕಾರಣ ಕಿಮ್ಸ್‌ನ ನಿರ್ಭಯಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ.

ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯ ಸ್ಥಿರವಾಗಿದ್ದು, ಮಗುವಿಗೆ ಎನ್‌ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ ವೈದ್ಯರು ಕಾನೂನು ಪ್ರಕಾರ ತಕ್ಷಣವೇ ಮೆಡಿಕೊ ಲೀಗಲ್ ಕೇಸ್ (MLC) ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಆರಂಭದಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ತನಿಖೆಯನ್ನು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಡಿಎನ್‌ಎ ಪರೀಕ್ಷೆಯ ವರದಿ ಬಳಿಕ ಪ್ರಮುಖ ಆರೋಪಿಯ ಗುರುತು ಅಂತಿಮವಾಗುವ ಸಾಧ್ಯತೆ ಇದೆ.

ಒಟ್ಟಾರೆ, ಅಪ್ರಾಪ್ತೆ ಹೆರಿಗೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಸತ್ಯಾಂಶ ಡಿಎನ್‌ಎ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

About The Author