Hubli News: ಬಡವರ ಹಸಿವು ನೀಗಿಸಲು ಸರ್ಕಾರ ನೀಡುವ ಅನ್ನಭಾಗ್ಯದ ಜೋಳವೇ ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಸ್ತೆ ಪಾಲಾಗಿದೆ. ಕುಂದಗೋಳ ತಾಲೂಕಿನ ಹಿರೇನರ್ತಿ–ಚಿಕ್ಕನೇರ್ತಿ ಮಾರ್ಗ ಮಧ್ಯೆ ಬರೋಬ್ಬರಿ 30 ಜೋಳದ ಚೀಲಗಳು ರಸ್ತೆ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಬಡವರಿಗೆ ವಿತರಿಸಬೇಕಿದ್ದ ಆಹಾರ ಧಾನ್ಯಗಳ ಸಾಗಣೆಯಲ್ಲೇ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮೇಲೆ ಬಿದ್ದಿರುವ ಜೋಳದ ಚೀಲಗಳು… ಒಂದಲ್ಲ, ಎರಡಲ್ಲ ಬರೋಬ್ಬರಿ 30 ಚೀಲಗಳು. ಕುಂದಗೋಳ ತಾಲೂಕಿನ ಹಿರೇನರ್ತಿ–ಚಿಕ್ಕನೇರ್ತಿ ಮಾರ್ಗ ಮಧ್ಯೆ ಈ ದೃಶ್ಯ ಕಂಡುಬಂದಿದೆ. ಪ್ರತಿ ಚೀಲವೂ ಸುಮಾರು 50 ಕೆ.ಜಿ. ತೂಕ ಹೊಂದಿದ್ದು, ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಬೇಕಿದ್ದ ಜೋಳವನ್ನು ಸಾಗಿಸುವ ವೇಳೆ ಚೀಲಗಳು ರಸ್ತೆ ಮೇಲೆ ಬಿದ್ದಿವೆ ಎನ್ನಲಾಗಿದೆ.
ಜೋಳದ ಚೀಲಗಳು ಪದೇಪದೇ ರಸ್ತೆ ಮೇಲೆ ಬೀಳುತ್ತಿವೆ ಎಂಬುದು ಗ್ರಾಮಸ್ಥರ ಆರೋಪ. ಘಟನೆ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಗ್ರಾಮಸ್ಥರು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಗೋಡೌನ್ ಮೇಲ್ವಿಚಾರಕ ಸುಭಾಷ್ ಉಡಾಫೆಯಾಗಿ ಉತ್ತರಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಗ್ರಾಮಸ್ಥರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ಒಂದೆಡೆ ಮಳೆ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ಬಡವರಿಗಾಗಿ ಮೀಸಲಿಟ್ಟ ಆಹಾರ ಧಾನ್ಯಗಳೇ ರಸ್ತೆ ಪಾಲಾಗುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೋಳದ ಚೀಲಗಳು ರಸ್ತೆ ಮೇಲೆ ಬೀಳಲು ಕಾರಣವೇನು? ಸಾಗಣೆ ವೇಳೆ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಾಗಿದೆಯೇ? ಧಾನ್ಯ ಹಾಳಾದರೆ ಅದರ ಹೊಣೆ ಯಾರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಬಡವರಿಗೆ ತಲುಪಬೇಕಾದ ಅನ್ನಭಾಗ್ಯದ ಧಾನ್ಯವನ್ನು ಸುರಕ್ಷಿತವಾಗಿ ಸಾಗಿಸಿ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಆಹಾರ ಇಲಾಖೆಯದ್ದು. ಹೀಗಾಗಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾಗಣೆಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.

