Hubli News: ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆಗಳ ಪಾರ್ಕಿಂಗ್ ಅವ್ಯವಸ್ಥೆ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ ತಂದಿದೆ. ಗೋಕುಲ್ ರಸ್ತೆಯ ಕೆಎಸ್ಆರ್ಟಿಸಿ ಬಸ್ ಡಿಪೋ ಮುಂಭಾಗ, ಹೊಸ ಕೋರ್ಟ್ ಕಡೆಗೆ ಹೋಗುವ ರಸ್ತೆ ಹಾಗೂ ವಿದ್ಯಾನಗರ ಸಂಪರ್ಕಿಸುವ ರಸ್ತೆಯಲ್ಲಿ ಆಸ್ಪತ್ರೆಗಳಿಗೆ ಬರುವ ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ. ಒಂದೆಡೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ… ಮತ್ತೊಂದೆಡೆ ಪಾರ್ಕಿಂಗ್ ಇದ್ದರೂ ಸಾರ್ವಜನಿಕರ ವಾಹನಗಳಿಗೆ ಪ್ರವೇಶವಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಇದು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕೆಎಸ್ಆರ್ಟಿಸಿ ಬಸ್ ಡಿಪೋ ಮುಂಭಾಗದ ದೃಶ್ಯ. ಇದೇ ರಸ್ತೆ ಹೊಸ ಕೋರ್ಟ್ ಹಾಗೂ ವಿದ್ಯಾನಗರದತ್ತ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಈ ರಸ್ತೆಯ ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ವಾಹನ ನಿಲ್ಲಿಸಲು ಜಾಗವಿಲ್ಲದೆ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.
ಪರಿಣಾಮ, ಪ್ರಮುಖ ರಸ್ತೆಯಲ್ಲೇ ಸಾಲು ಸಾಲಾಗಿ ವಾಹನಗಳು ನಿಲ್ಲುತ್ತಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಪಾದಚಾರಿಗಳ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಯ ಪಕ್ಕದಲ್ಲೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆಯನ್ನೇ ಪಾರ್ಕಿಂಗ್ ಸ್ಥಳವನ್ನಾಗಿ ಮಾಡಿಕೊಳ್ಳುವಂತಾಗಿದೆ.
ಇನ್ನು ಪಾರ್ಕಿಂಗ್ ವ್ಯವಸ್ಥೆ ಇರುವ ಆಸ್ಪತ್ರೆಗಳ ಪರಿಸ್ಥಿತಿ ಮತ್ತೊಂದು ರೀತಿಯದ್ದು. ಸಾರ್ವಜನಿಕರು ಪಾರ್ಕಿಂಗ್ ಬಗ್ಗೆ ಪ್ರಶ್ನಿಸಿದರೆ, ಆಸ್ಪತ್ರೆಯ ಸಿಬ್ಬಂದಿ ಡಾಕ್ಟರ್ಗಳಿಗೆ ಮಾತ್ರ ಪಾರ್ಕಿಂಗ್ಗೆ ಅವಕಾಶ ಎಂದು ಹೇಳುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.
ಹಾಗಾದರೆ ರೋಗಿಗಳು ಹಾಗೂ ಅವರ ಸಂಬಂಧಿಕರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು? ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಸಾಮಾನ್ಯ ಜನರಿಗೆ ಪಾರ್ಕಿಂಗ್ ಸೌಲಭ್ಯ ಇಲ್ಲ… ಆದರೆ ಆಸ್ಪತ್ರೆಯೊಳಗೆ ಪಾರ್ಕಿಂಗ್ ಇದ್ದರೂ ಡಾಕ್ಟರ್ಗಳಿಗೆ ಮಾತ್ರವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಂದು ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಆದರೆ ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದಿರುವುದು ಎಷ್ಟು ಸರಿ? ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಸಾರ್ವಜನಿಕರಿಗೆ ಅವಕಾಶ ನೀಡದಿದ್ದರೆ, ರಸ್ತೆಯಲ್ಲೇ ವಾಹನ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗುವುದು ಸಹಜ.
ಒಂದೆಡೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲದ ಖಾಸಗಿ ಆಸ್ಪತ್ರೆಗಳು… ಮತ್ತೊಂದೆಡೆ ಪಾರ್ಕಿಂಗ್ ಇದ್ದರೂ ಡಾಕ್ಟರ್ಗಳಿಗೆ ಮಾತ್ರ ಅವಕಾಶ ಎನ್ನುವ ಆರೋಪ. ಹಾಗಾದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಸಾಮಾನ್ಯ ರೋಗಿಗಳು ಮತ್ತು ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಯಾರ ಜವಾಬ್ದಾರಿ?
ಗೋಕುಲ್ ರಸ್ತೆ, ಕೆಎಸ್ಆರ್ಟಿಸಿ ಡಿಪೋ ಮುಂಭಾಗ, ಹೊಸ ಕೋರ್ಟ್ ರಸ್ತೆ ಹಾಗೂ ವಿದ್ಯಾನಗರ ರಸ್ತೆಯಲ್ಲಿರುವ ಆಸ್ಪತ್ರೆಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ರಸ್ತೆಯನ್ನೇ ಪಾರ್ಕಿಂಗ್ ಮಾಡಿಕೊಳ್ಳುವ ಪರಿಸ್ಥಿತಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ಸಾರ್ವಜನಿಕರೇ ಪ್ರತಿದಿನ ಸಂಚಾರದ ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಮುಂದುವರಿಯಲಿದೆ.
ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ
