Hubli News: ಹುಬ್ಬಳ್ಳಿ: ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಹಾಗೂ ಕುರಿಗಾರರ ಪಶು ಪಾಲಕರ ದೌರ್ಜನ್ಯ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರದೇಶ ಕುರುಬ ಸಮಾಜದ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಅಂಬೇಡ್ಕರ ಸರ್ಕಲ್ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ಕುರಿಗಳು ಕುರಿಗಾರರು ಮತ್ತೆ ಕುರುಬ ಸಮಾಜದ ನಾಯಕರು ಕುರಿಗಳ ಜೊತೆ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕುರುಬ ಸಮಾಜ ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ, ಕಳೆದ 4-5 ದಶಕಗಳಿಂದ ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿಗಾಗಿ ರಾಜ್ಯಾದ್ಯಾಂತ ಹೋರಾಟಗಳು ಮಾಡುತ್ತಾ ಬಂದಿದೆ. ಆದ್ರೆ ಇದುವರೆಗೂ ರಾಜ್ಯ ಸರ್ಕಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೆ ವರದಿ ಸಲಿಸಿಲ್ಲ. ಈಗ ಸಮಾಜದವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಅವರು ಕೂಡಲೇ ಕೇಂದ್ರಕ್ಕೆ ಪತ್ರವನ್ನು ಕಳುಹಿಸಬೇಕು. ಇಲ್ಲದಿದ್ದರೆ ಮುಂದೆ ಬರುವ ತಾಲೂಕ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಸಮಾಜ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮಾಜದ ಮತ ಪಡೆದು ಎರಡನೆ ಭಾರಿ ಮುಖ್ಯಮಂತ್ರಿ ಆಗಿದ್ದಾರೆ. ಕ್ಯಾಬಿನೆಟ್ ನಲ್ಲಿ ಓರ್ವನೇ ಸಮಾಜದ ಮಂತ್ರಿದ್ದಾರೆ. ಬೇರೆ ಸಮಾಜದ ಮುಖ್ಯಮಂತ್ರಿಗಳಿದ್ದಾಗ ಎಂಟತ್ತು ಜನ ಮಂತ್ರಿಗಳು ಇರುತ್ತಿದ್ದರು. ಸಿದ್ದರಾಮಯ್ಯ ಅವರಿಂದ ಸಮಾಜಕ್ಕೆ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕುರಿಗಾರರು ಅರಣ್ಯದಲ್ಲಿ ಕುರಿ ಮೇಯಿಸಬಾರದು ಎಂದು ಆದೇಶ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣು ಮುಚ್ಚಿ ಕುಳಿತ್ತಿದ್ದಾರಾ ಎಂದು ಪ್ರಶ್ನಿಸಿದರು. ಈ ಆದೇಶ ಕೂಡಲೇ ಹಿಂದಕ್ಕೆ ಪಡೆಯಬೇಕು. ಕುರಿಗಾಯಿಗಳ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.