Hubli News: ಹುಬ್ಬಳ್ಳಿ: ಸಾಣೇಹಳ್ಳಿ ಶ್ರೀಗಳು ರಾಜ್ಯದಲ್ಲಿ ಜನ, ಜಾತಿ ಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಅವರು ತಮ್ಮ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಬೇಕಿತ್ತು. ಆದರೆ ನಿವೃತ್ತ ಐಎಎಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದು ದುರದೃಷ್ಟಕರ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಪೀಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು, ಇತ್ತಿಚೆಗೆ ಸಾಣೇಹಳ್ಳಿ ಶ್ರೀಗಳು ಕಲಬುರಗಿಯಲ್ಲಿ ಜಂಗಮರು ಅವಿವೇಕಿಗಳು ಎಂದು ಹೇಳಿಕೆ ನೀಡಿದ್ದಾರೆ. ಬಸವಣ್ಣನವರು ಯಾವ ವಚನದಲ್ಲಿ ಜಾತಿ ನಿಂದನೆ ಮಾಡುವಂತೆ ಹೇಳಿದ್ದಾರೆ ಎಂಬುದನ್ನು ಶ್ರೀಗಳು ತಿಳಿಯಬೇಕು ಎಂದರು.
ರಾಜ್ಯದಲ್ಲಿ ಎಲ್ಲಾ ಸ್ವಾಮೀಜಿಗಳು ಸಮುದಾಯ ಒಂದು ಮಾಡಲು ಹೋರಾಡುತ್ತಿದ್ದಾರೆ. ಆದರೆ ಶುಕ್ರವಾರ ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾಡಿನ ಪ್ರತಿಷ್ಠಿತ ಸಾಣೇಹಳ್ಳಿಯ ಶ್ರೀಗಳು ದಿಂಗಾಲೇಶ್ವರ ಶ್ರೀಗಳು ಬಟ್ಟೆ ಬದಲಾವಣೆ ಮಾಡಿದ್ದಾರೆ. ಕಾವಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಗೋಸೂಂಬೆ ಆಗಿದ್ದಾರೆ ಎಂದು ನಮ್ಮ ಬಗ್ಗೆ ಮಾತನಾಡಿದ್ದಾರೆ. ಶಿರಹಟ್ಟಿ ಫಕೀರ ಸಂಸ್ಥಾನ ಮಠದ ಸಂಪ್ರದಾಯದಂತೆ ನಾವು ಕೇಸರಿ ಪೇಟ, ಬಿಳಿ ಬಟ್ಟೆ, ಹಸಿರು ಶಾಲು ತೊಟ್ಟಿದ್ದೇವೆ. ಇವು ರಾಷ್ಟ್ರಧ್ವಜದ ಸಂಕೇತ. ನಮ್ಮ ಬಗ್ಗೆ ಸಾಣೇಹಳ್ಳಿ ಶ್ರೀಗಳು ಯಾರ ಒತ್ತಡಕ್ಕೊಳಗಾಗಿ ನನ್ನ ಬಗ್ಗೆ ಈ ರೀತಿಯಾಗಿ ಮಾತನಾಡಿದ್ದಾರೆ ಗೊತ್ತಿಲ್ಲ? ಶಿರಹಟ್ಟಿ ಮಠದಲ್ಲಿ ಐದು ತರಹದ ಬಟ್ಟೆ ಧರಿಸುವ ಸಂಪ್ರದಾಯವಿದೆ. ನಾನು ಈ ಮಠಕ್ಕೆ 14ನೇ ಪೀಠಾಧಿಪತಿಯಾಗಿದ್ದು, ನನ್ನ ಸ್ವಇಚ್ಛೆಯಿಂದ ಈ ಬಟ್ಟೆ ಧರಿಸಿಲ್ಲ, ಮಠದ ಸಂಪ್ರದಾಯದಂತೆ ಬಟ್ಟೆ ಧರಿಸಿದ್ದೇನೆ. ತಾವು ಇಡೀ ಸಮಾಜದ ಬಟ್ಟೆ (ಹಾದಿ) ಬದಲಿಸುತ್ತಿದ್ದೀರಿ ಎಂದು ಹರಿಹಾಯ್ದರು.
ತಮ್ಮ ಬಗ್ಗೆ ಹಾಗೂ ಸಿರಿಗೇರಿಪೀಠದ ಬಗ್ಗೆ ಅಪಾರವಾದ ಗೌರವವಿದೆ. ನಿಮ್ಮನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯುವ ಸ್ವಾಮೀಜಿ ನಾನು. ವೀರಶೈವ ಲಿಂಗತತ್ವದ ಬಗ್ಗೆ ಸಿರಿಗೇರಿಯ ಶ್ರೀಗಳು ಸಾಕಷ್ಟು ಉತ್ತಮ ವಿಚಾರಗಳನ್ನು ಜನರಿಗೆ ತಿಳಿಸಿದ್ದಾರೆ. ಅದರಂತೆ ತಮ್ಮ ಮಠದ ಮೂಲ ಸಿದ್ದಾಂತವನ್ನು ತಾವು ಅಪ್ಪಿಕೊಳ್ಳಬೇಕು ಹೊರತು ತಪ್ಪಿ ನಡೆಯಬಾರದು.
ಇಷ್ಟೇಲ್ಲ ಮಾತನಾಡುವ ಶ್ರೀಗಳು ತಮ್ಮ ಪೀಠಕ್ಕೆ ಮುಂದೆ ಯಾವ ಜಾತಿಯ ವಟುವನ್ನು ಪೀಠಾಧಿಪತಿಯಾಗಿ ನೇಮಕ ಮಾಡುತ್ತೀರಿ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಸ್ವಾಮಿಗಳು ಮಹಾವೀರ, ಬುದ್ಧರ ಹಾಗೇ ಬಸವ ಧರ್ಮ ಸ್ಥಾಪಿಸಿ. ಆದರೆ ಅಖಂಡ ವೀರಶೈವ ಲಿಂಗಾಯತ ಸಮುದಾಯ ಇಬ್ಭಾಗಿಸುವುದು ಸರಿಯಲ್ಲ. ಅಭಿಯಾನದಲ್ಲಿ ಬಸವಣ್ಣನವರನ್ನು ನೀವೇ ಖರೀದಿ ಮಾಡಿದ ರೀತಿಯಲ್ಲಿ ಮಾತನಾಡುವುದು ಸಮಂಜಸವಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಸಾವುಕಾರ, ಪ್ರಕಾಶ ಬೆಂಡಿಗೇರಿ, ಮಲ್ಲಿಕಾರ್ಜುನ ಶಿರಗುಪ್ಪಿ, ಶಂಭು ಲಕ್ಷ್ಮೇಶ್ವರಮಠ ಇತರರಿದ್ದರು.




