Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಪೊಲೀಸ್ ಕ್ವಾಟರ್ಸ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮನೆಗಳ ಕೀಲಿ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ, ಹಣ ಕಳ್ಳತನವಾದ ಘಟನೆ ನಡೆದಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು,,, ನಗರದ ಚಾಣಕ್ಯಪುರಿ ಪೊಲೀಸ್ ಕ್ವಾಟರ್ಸ್ ಹಾಗೂ ಸಿ.ಎ.ಆರ್ ಮೈದಾನ ಬಳಿಯ ಪೊಲೀಸರು ವಾಸಿಸುವ ನಿವಾಸಗಳಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮನೆಗಳಿಗೆ ಕಳ್ಳರು ನುಗ್ಗಿ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಸೇರಿ ಬರೋಬ್ಬರಿ 2.5 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.
ಯಲ್ಲಪ್ಪ ದೊಡಮನಿ ಅವರು ಚಾಣಕ್ಯಪುರಿ ಪೊಲೀಸ್ ಕ್ವಾಟರ್ಸ್‌ನಲ್ಲಿ ವಾಸವಿದ್ದು, ಜುಲೈ 17ರಂದು ಮಧ್ಯಾಹ್ನ 12.30ಕ್ಕೆ ಮನೆಗೆ ಬೀಗ ಹಾಕಿ ಸ್ವಗ್ರಾಮಕ್ಕೆ ತೆರಳಿದ್ದರು. ಜುಲೈ 19ರಂದು ಸಂಜೆ 7 ಗಂಟೆಗೆ ಹಿಂದಿರುಗಿದಾಗ ಮನೆಗೆ ಕಳ್ಳರು ನುಗ್ಗಿದ ವಿಚಾರ ಗೊತ್ತಾಗಿದೆ.
ಇನ್ನು ಇದೇ ವೇಳೆ, ಸಿ.ಎ.ಆರ್. ಮೈದಾನದ ಹತ್ತಿರವಿರುವ ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸಿಸುತ್ತಿರುವ ಸುನೀಲಕುಮಾರ ಲಂಬಾಣಿ ಅವರ ಮನೆಯಲ್ಲಿ ಸಹ ಇದೇ ರೀತಿಯ ಕಳ್ಳತನ ನಡೆದಿದೆ. ಇಲ್ಲಿ ಸಹ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಕಳ್ಳತನವಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಶಂಕಿತರ ವಿಚಾರಣೆ ಮುಂದುವರೆದಿದೆ. ನಿವಾಸಿಗಳ ನಡುವೆ ಭಯದ ವಾತಾವರಣ ತಲೆದೋರಿದ್ದು, ಮುನ್ನೆಚ್ಚರಿಕೆ ಕ್ರಮಗೊಳ್ಳುವಂತೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.