Hubli News: ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಪೌರಕಾರ್ಮಿಕನೊರ್ವ ಗುತ್ತಿಗೆದಾರನ ಕಿರುಕುಳ ಹಾಗೂ ನಿಗಧಿತ ಸಂಬಳ ಬಾರದ ಹಿನ್ನೆಲೆಯಲ್ಲಿ ಮನನೊಂದು ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮುಂಜಾನೆ ಧಾರವಾಡದಲ್ಲಿ ನಡೆದಿದೆ.
ಮಾಳಮಡ್ಡಿಯ ನಿವಾಸಿ ಕೃಷ್ಣ ವಜ್ಜನವರ (27) ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಈತ ಎಂದಿನಂತೆ ವಾರ್ಡ್ ನಂಬರ್ 17 ರಲ್ಲಿ ಟೋಲ್ ನಾಕಾ ಬಳಿಯ ಭಾರತ ಪೆಟ್ರೋಲ್ ಬಂಕ್ ಬಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವೇಳೆ ಕೂಡಲೇ ಜೊತೆಗಿದ್ದ ಪೌರಕಾರ್ಮಿಕರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಪೌರಕಾರ್ಮಿಕ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನೂ ಈ ವೇಳೆ ವಿಷ ಸೇವಿಸಿದ ಕೃಷ್ಣ ವಜ್ಜನವರ ಕುಟುಂಬಸ್ಥರು ಮಾತನಾಡಿ, ಕೃಷ್ಣ ವಜ್ಜನವರ ಹು-ಧಾ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಕಾನೂನು ಬಾಹಿರವಾಗಿ ಗುತ್ತಿಗೆ ಪಡೆದುಕೊಂಡಿರುವ ಕೃಷ್ಣ ಅರವಿಡಿ ಎಂಬಾತ ನಿಗಧಿತ ಸಂಬಳ ನೀಡದೇ 24000 ಸಂಬಳದಲ್ಲಿ ಇಎಸ್ಐ, ಪಿಎಫ್ ಕಡಿತ ಮಾಡಿ 19000 ಸಂಬಳ ನೀಡಬೇಕು. ಆದರೆ ಗುತ್ತಿಗೆದಾರ ಪ್ರತಿ ತಿಂಗಳು 7000-8000 ಸಂಬಳ ನೀಡುತ್ತಿದ್ದು, ಇದರ ಜೊತೆಗೆ ತನ್ನ ಮನೆ, ಹೊಲದಲ್ಲಿ ಖಾಸಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ಅಲ್ಲದೇ ಸಂಬಳ ಕೇಳಲು ಹೋದ ಕಾರ್ಮಿಕರಿಗೆ ಅವಹೇಳನಕಾರಿಯಾಗಿ ನಿಂದಿಸುತ್ತಾನೆ.
ಈ ಬಗ್ಗೆ ಯಾರಿಗಾದರೂ ಹೇಳು ನನಗೆ ಏನೂ ಮಾಡಲು ಆಗುವುದಿಲ್ಲ ಎಂದು ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಹೀಗಾಗಿ ಇಂದು ನಮ್ಮ ಕುಟುಂಬದ ಸದಸ್ಯ ಕೃಷ್ಣ ವಜ್ಜನವರ ವಿಷ ಸೇವನೆ ಮಾಡಲು ಗುತ್ತಿಗೆದಾರನೇ ನೇರಕಾರಣನಾಗಿದ್ದಾನೆ. ಹೀಗಾಗಿ ಆತನ ಗುತ್ತಿಗೆಯನ್ನು ರದ್ದುಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಪಾಲಿಕೆಯಿಂದಲೇ ನೇರ ಸಂಬಳ ಪಾವತಿಗೆ ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ಹೋರಾಟದ ಹೆಜ್ಜೆ ಇಡುವುದಾಗಿ ಎಚ್ಚರಿಕೆ ನೀಡಿದ್ದಾರೆ.




