Hubli News: ಹುಬ್ಬಳ್ಳಿ: ರಕ್ಷಾಬಂಧನ ಹಬ್ಬದ ಪ್ರಯುಕ್ತವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಭಾಗಿಯಾಗುವ ಮೂಲಕ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಣೆ ಮಾಡಿದರು.
ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ, ರಕ್ಷಾ ಬಂಧನ ಉತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಾಲ್ಗೊಂಡಿದ್ದು, ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಕಿರಣ ಕಂಠಿ ಮತ್ತು ಬೌದ್ಧಿಕವನ್ನು ಪ್ರಚಾರ ವಿಭಾಗದ ಪ್ರಮುಖರಾದ ಅರುಣಕುಮಾರ ಅವರು ನಡೆಸಿಕೊಟ್ಟರು.
ರಕ್ಷಾ ಬಂಧನವು ಭಾರತೀಯ ಸಂಸ್ಕೃತಿಯಲ್ಲಿ ಸಹೋದರ- ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದೆ. ರಕ್ಷಾ ಬಂಧನ ಉತ್ಸವದ ಮೂಲಕ ಸಮಾಜದಲ್ಲಿ ಐಕ್ಯತೆ ಮತ್ತು ಬಂಧುತ್ವದ ಸಂದೇಶವನ್ನು ಸಾರುವ ದೃಷ್ಟಿಯಿಂದ ಆರ್‌ಎಸ್‌ಎಸ್‌ನ ರಕ್ಷಾ ಬಂಧನ ಕಾರ್ಯಕ್ರಮವು ಕೇವಲ ಸಹೋದರ-ಸಹೋದರಿಯರ ಬಾಂಧವ್ಯಕ್ಕೆ ಸೀಮಿತವಾಗಿರದೆ, ಸಮಾಜದ ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್ ರಕ್ಷಾ ಬಂಧನವನ್ನು ಸಾಮಾಜಿಕ ಏಕತೆಯ ಸಂಕೇತವಾಗಿ ಸಮಾಜದಲ್ಲಿ ಜಾತಿ, ಧರ್ಮ, ಮತ್ತು ಇತರ ಭೇದಗಳನ್ನು ಮೀರಿ ಎಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ನೀಡುತ್ತದೆ. ಸಂಘದ ಸ್ವಯಂಸೇವಕರು ಒಬ್ಬರಿಗೊಬ್ಬರು ರಾಖಿಯನ್ನು ಕಟ್ಟುವ ಮೂಲಕ ಪರಸ್ಪರ ರಕ್ಷಣೆ ಮತ್ತು ಸಹಕಾರದ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಇದು ಕೇವಲ ಕುಟುಂಬದ ಬಾಂಧವ್ಯಕ್ಕೆ ಸೀಮಿತವಾಗಿರದೆ, ರಾಷ್ಟ್ರೀಯ ಏಕತೆ ಮತ್ತು ಸಮಾಜದ ಒಗ್ಗಟ್ಟಿಗೆ ಒತ್ತು ನೀಡುತ್ತದೆ ಎಂದು ಅಭಿಪ್ರಾಯ ಪಡಲಾಯಿತು.