Hubli: ಜ್ವಾಲೆ ಹರಡುವ ‘ಸೌರಶಕ್ತಿ ಚಾಲಿತ ವಿದ್ಯುತ್ ಸ್ಟೌ’ ಪ್ರದರ್ಶಿಸಿ, ಪರಿಚಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದೆ. ಇತ್ತ ಭಾರತ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆಯ ಹೆಜ್ಜೆ ಇಡುತ್ತಿದೆ.

ನವೀಕರಿಸಬಹುದಾದ ಇಂಧನ ಖಾತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಲಹೆಯಂತೆ LPGಗೆ ಪರ್ಯಾಯವಾಗಿ ಕೇಂದ್ರ ಸರ್ಕಾರ ದೇಶದೆಲ್ಲೆಡೆ 50 ಲಕ್ಷ PNG ಸಂಪರ್ಕಕ್ಕೆ ಪ್ರಾಶಸ್ತ್ಯ ನೀಡಿದ ಬೆನ್ನಲ್ಲೇ ಇದೀಗ ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ ‘ಸೌರಶಕ್ತಿ ಚಾಲಿತ ವಿದ್ಯುತ್ ಸ್ಟೌ’ ಪರಿಚಯಿಸಿ ಅದರ ಉತ್ಪಾದನೆಗೆ ಆದ್ಯತೆ ನೀಡುವ ಚಿಂತನೆಯೂ ನಡೆಯುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿರುವ ಜೋಶಿ, LPG ಇಲ್ಲದೆ ಜ್ವಾಲೆ ಉತ್ಪಾದಿಸುವ ವಿನೂತನ ತಂತ್ರಜ್ಞಾನದ ಸ್ಟೌ ಪ್ರದರ್ಶಿಸಿ, ಪರಿಚಯಿಸಿದ್ದಾರೆ. ಗ್ಯಾಸ್ ಸ್ಟೌ ರೀತಿಯಲ್ಲೇ ಜ್ವಾಲೆ ಹರಡುವ ಈ ಸೌರಶಕ್ತಿ ಚಾಲಿತ ವಿದ್ಯುತ್ ಸ್ಟೌ ನೋಡಿ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇದರ ಉತ್ಪಾದನೆಗೆ ಸಿದ್ಧತೆ ನಡೆಸುವಂತೆ ಗಮನ ಸೆಳೆದಿದ್ದಾರೆ.

ಎಲ್‌ಪಿಜಿಯ ಅಗತ್ಯವಿಲ್ಲದೆ ಅನಿಲದಂತೆ ಉರಿಯುವ ಶುದ್ಧ ಇಂಧನ ಮೂಲವನ್ನು ಅರಸುತ್ತಿದ್ದ ಭಾರತೀಯರಿಗೆ ಇದೀಗ ಈ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ. ಹೊಟೇಲ್, ಬೇಕರಿ ಮುಂತಾದ ಆಹಾರೋದ್ಯಮಿಗಳಿಗೆ ಒಂದು ಪರ್ಯಾಯ ಇಂಧನ ಮೂಲದ ಒಲೆಯಾಗಿ ಕಾಣಿಸುತ್ತಿದೆ. ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಸಾಕಾರಕ್ಕೆ ಮತ್ತೊಂದು ಗರಿ ಎನ್ನುತ್ತಾರೆ ಸಚಿವ ಜೋಶಿ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ, ಈ ಜ್ವಾಲೆ ಉತ್ಪಾದಿಸುವ ವಿದ್ಯುತ್ ಸ್ಟೌ ಪ್ರದರ್ಶಿಸಿ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾಗುವಂತೆ ವಿವಿಧ ಮಾದರಿಗಳಲ್ಲಿ ತಯಾರಿಸಿ ಪೂರೈಸಬೇಕಿದೆ ಎಂದಿದ್ದಾರೆ.

ಏನಿದರ ವಿಶೇಷತೆ:? ವಿದ್ಯುತ್ ಚಾಲಿತ ಈ ಸ್ಟೌವ್‌ನಲ್ಲಿ LPG ಇಲ್ಲದೆಯೇ ಗ್ಯಾಸ್ ಒಲೆಯಂತೆಯೇ ಜ್ವಾಲೆ ಉತ್ಪಾದನೆ ಆಗುತ್ತದೆ. ಹೆಚ್ಚು ಶಾಖವೂ ಇರುತ್ತದೆ. ಮಾತ್ರವಲ್ಲದೆ, ಕಾರ್ಬನ್ ಸಹ ಹೊರಸೂಸುವುದಿಲ್ಲ. ನಿಜವಾಗಿಯೂ ನಾನು ಸಹ ಈ ಹೊಸ ತಂತ್ರಜ್ಞಾನದಿಂದ ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ ಜೋಶಿ.

ಭಾರತೀಯ ತಯಾರಕರು ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್​ಪಿಜಿರಹಿತ, ವಿದ್ಯುತ್ ಜ್ವಾಲೆ ಹರಡುವ ನೂತನ ಒಲೆಯನ್ನು ದೇಶದೊಳಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕೆಂದು ಜೋಶಿ ಕರೆ ಕೊಟ್ಟಿದ್ದಾರೆ.

ಸೂರ್ಯ ಘರ್ ಜೊತೆ ಸಂಯೋಜನೆ ಅಗತ್ಯ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಜೊತೆ ಈ ಸ್ಟೌ ಸಂಯೋಜಿಸಿದರೆ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದ ದೇಶಾದ್ಯಂತ ಒಂದು ಮಹತ್ತರ ಬದಲಾವಣೆ ತರಬಹುದು ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ಇನ್ನು, ಎಲ್​ಪಿಜಿಗೆ ಪರ್ಯಾಯವಾಗಿ ದೇಶದಲ್ಲಿ ಮತ್ತೊಂದು ತಂತ್ರಜ್ಞಾನದ ಬಗ್ಗೆಯೂ ಚರ್ಚೆ ನಡೆದಿದೆ. ಎಲ್​ಪಿಜಿ ಕೊರತೆ ಮತ್ತು ಬೆಲೆ ಏರಿಕೆ ಪರಿಣಾಮ ಹೈಡ್ರೋಜನ್ ಅಡುಗೆ ಘಟಕದ ಬಗ್ಗೆಯೂ ವ್ಯಾಪಕ ಚಿಂತನೆ ನಡೆದಿದೆ. ನೀರಿನಿಂದ ಅನಿಲ ಉತ್ಪಾದಿಸುವ ವಿಧಾನ ಇದಾಗಿದೆ.

About The Author