ಹುಬ್ಬಳ್ಳಿಯ ಈ ಮತದಾರರು ದೇಶಕ್ಕೇ ಮಾದರಿ…!

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಪಾಲಿಕೆ ಚುನಾವಣೆ ದಿನೇ ದಿನೇ ಕಾವೇರುತ್ತಿದೆ. ಎಲೆಕ್ಷನ್ ವೇಳೆ ಮತದಾರರಿಗೆ ಜನಪ್ರತಿನಿಧಿಗಳು ನಾನಾ ರೀತಿಯ ಆಶ್ವಾಸನೆ ನೀಡಿದ್ರೆ ಇಲ್ಲಿ ಮತದಾರರೇ ಪ್ರಣಾಳಿಕೆ ತಯಾರಿಸಿ ಬಿಡುಗಡೆಗೊಳಿಸಿದ್ದಾರೆ.

ಹೌದು, ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳ ಕಣ್ಣಿಗೆ ಕಾಣಿಸಿಕೊಳ್ಳೋ ಜನಪ್ರತಿನಿಧಿಗಳು ಗೆದ್ದ ಮೇಲೆ ನಮ್ಮ ಕಡೆ ತಿರುಗಿಯೂ ನೋಡೋದಿಲ್ಲ. ಅವರದ್ದೇ ಆದ ಕೆಲಸ, ಜವಾಬ್ದಾರಿಗಳಲ್ಲಿ ಬ್ಯುಸಿಯಾಗಿ ಕಡೆಗೆ ತಾವೇ ಜನರಿಗೆ ಕೊಟ್ಟ ಭರವಸೆಯನ್ನೂ ಈಡೇರಿಸೋದಕ್ಕೆ ಮರೆತುಬಿಡ್ತಾರೆ. ಇದಕ್ಕಾಗಿಯೇ ಹುಬ್ಬಳ್ಳಿಯ ಲಿಂಗರಾಜನಗರದ ವಾರ್ಡ್ ನಂಬರ್ 37ರ ಮತದಾರರು ಖುದ್ದು ತಾವೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ವಾರ್ಡ್ ಗೆ ಬೇಕಾದ ಸೌಲಭ್ಯಗಳ ಪಟ್ಟಿ ತಯಾರಿಸಿ ಪ್ರಣಾಳಿಕೆ ಸಿದ್ಧಪಡಿಸಿರೋ ಈ ವಾರ್ಡ್ ನ ಜನರು, ತಮ್ಮ ಬಳಿ ಮತ ಚಲಾಯಿಸುವಂತೆ ಕೇಳಿಕೊಂಡು ಬರುವ ಜನಪ್ರತಿನಿಧಿಗಳಿಗೆ ಪ್ರಣಾಳಿಕೆಯನ್ನ ನೀಡ್ತಿದ್ದಾರೆ.


ಪ್ರತಿ ರಸ್ತೆ-ಅಡ್ಡ ರಸ್ತೆಗೂ ಕನ್ನಡ ಫಲಕ, ಕಸ ಸಂಗ್ರಹ ವಾಹನಕ್ಕೆ ಸೆನ್ಸಾರ್ ಯಂತ್ರ ಅಳವಡಿಕೆ,ಸಮರ್ಪಕ ನೀರು ಸರಬರಾಜು, ಉದ್ಯಾನವನ, ನಿವೇಶನ, ಸಮುದಾಯಭವನ ನಿರ್ಮಾಣ ಹೀಗೆ ಒಟ್ಟು 25 ಬೆೇಡಿಕೆಗಳುಳ್ಳ ಪಟ್ಟಿಯನ್ನು ಈ ವಾರ್ಡ್ ನ ಮತದಾರರು ಬಿಡುಗಡೆಗೊಳಿಸಿದ್ದಾರೆ. ಇನ್ನು ಪಾಲಿಕೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೋ ಅಂತಹವರಿಗೆ ಮಾತ್ರ ಮತ ಹಾಕ್ತೀವಿ ಅಂತ ಈ ವಾರ್ಡ್ ನ ಜನರು ನಿರ್ಧರಿಸಿದ್ದಾರೆ.

ಒಟ್ಟಾರೆ ಲಿಂಗರಾಜಪುರದ ಈ ಮತದಾರರು ಹೊಸದೊಂದು ಸಂಪ್ರದಾಯ ಸೃಷ್ಟಿಸಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದು ದೇಶಕ್ಕೇ ಮಾದರಿಯಾಗಿದ್ದಾರೆ.

About The Author