ಬೆಳಗಾವಿ: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಜನರ ಸಮಸ್ಯೆ ಕೇಳಲು ಬಾರದೆ ಇದೀಗ ಚುನಾವಣೆ ಪ್ರಚಾರಕ್ಕೆ ಜನರ ಬಳಿ ಓಡೋಡಿ ಹೋಗುತ್ತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಜಿಲ್ಲೆಯಿಂದ 4 ಮಂದಿ ಸಚಿವರಿದ್ದಾರೆ. ಆದ್ರೆ ಇವರೆಲ್ಲರೂ ಕೋವಿಡ್ ಹಾಗೂ ಪ್ರವಾಹ ವೇಳೆ ಸಮಸ್ಯೆಗಳ ನಿರ್ವಹಣೆ ಬಗ್ಗೆ ಒಂದು ಸಭೆಯನ್ನೂ ನಡೆಸಲಿಲ್ಲ. ಕನಿಷ್ಟಪಕ್ಷ ಜನರಿಗೆ ಸಾಂತ್ವನ ಹೇಳಿ, ಪರಿಹಾರ ಕೊಡಿಸೋ ಪ್ರಯತ್ನವನ್ನೂ ಮಾಡಲಿಲ್ಲ ಅಂತ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ರು. ಇನ್ನು ಜನರು ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಅಂತ ಕಿಡಿ ಕಾರಿದ್ರು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಸಂಪೂರ್ಣಗೊಳಿಸಿದೆ. ಬಾಕ್ಸೈಟ್ ರಸ್ತೆ, ಕಣಬರ್ಗಿ ರಸ್ತೆ, ಉದ್ಯಾನವನ, ಜಿಮ್, ಕ್ರೀಡಾಂಗಣ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳ ನಿರ್ಮಾವನ್ನೂ ಮಾಡಿದೆ. ಆದ್ರೆ ರಾಜಕೀಯ ದ್ವೇಷದಿಂದ ಸ್ಥಳೀಯ ಜನಪ್ರತಿನಿಧಿಗಳು ಅವುಗಳ ಉದ್ಘಾಟನೆಗೆ ಮುಂದಾಗಿಲ್ಲ ಅಂತ ಜಾರಕಿಹೊಳಿ ಇದೇ ವೇಳೆ ಆರೋಪ ಮಾಡಿದ್ರು.