ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿಗ್ನಿ ಗ್ರಾಮದಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಐದು ತಿಂಗಳ ಹಿಂದೆ ಮದುವೆಯಾದ 20 ವರ್ಷದ ಸಾಕ್ಷಿ ಕಂಬಾರ ಅವರನ್ನು, ಅವರ ಪತಿ ಆಕಾಶ್ ಕಂಬಾರ ಬರ್ಬರವಾಗಿ ಕೊಲೆಮಾಡಿ ಶವವನ್ನು ಬೆಡ್ ಕೆಳಗೆ ಅಡಗಿಸಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆ ಈ ಕೃತ್ಯ ಎಸಗಿದ ಆಕಾಶ್, ಕೊಲೆ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಈ ನಡುವೆ, ಆಕಾಶ್ ತಾಯಿ ಊರಿಗೆ ತೆರಳಿದ್ದರು. ಅವರು ಮನೆಗೆ ಮರಳಿ ಬಾಗಿಲು ತೆರೆಯುತ್ತಿದ್ದಂತೆಯೇ ಸೊಸೆ ಸಾಕ್ಷಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿ ಬೆಚ್ಚಿಬಿದ್ದರು.
ಸಾಕ್ಷಿಯ ತಂದೆ–ತಾಯಿಯ ಪ್ರಕಾರ, ಆಕಾಶ್ ವರದಕ್ಷಿಣೆಗಾಗಿ ಸಾಕ್ಷಿಗೆ ನಿರಂತರ ಕಿರುಕುಳ ನೀಡುತ್ತಿದ್ದನೆಂದು ದೂರಿದ್ದಾರೆ. ತನಿಖೆ ಸಂದರ್ಭದಲ್ಲಿ, ಸಾಕ್ಷಿ ತನ್ನ ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆಕಾಶ್ ಆಕೆಯನ್ನು ರೆಡ್‌ಹ್ಯಾಂಡ್ ಹಿಡಿದಿದ್ದಾನೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.
ಕೊಲೆ ಮಾಡಿದ ಬಳಿಕ ಆಕಾಶ್ ತನ್ನ ತಾಯಿಗೆ ಇನ್ಮುಂದೆ ನಾನು ಮನೆಗೆ ಬರುವುದಿಲ್ಲ ಎಂದು ತಿಳಿಸಿ ಪರಾರಿಯಾಗಿದ್ದಾನೆ. ಮೂಡಲಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ