Monday, November 17, 2025

Latest Posts

ಕಾಂಗ್ರೆಸ್ನಿಂದ ರಾಜಣ್ಣರನ್ನು ತೆಗೆಯಲು ನಡೆದಿತ್ತಾ ಪ್ಲಾನ್?

- Advertisement -

ಕಾಂಗ್ರೆಸ್‌ನಿಂದ ಕೆ.ಎನ್. ರಾಜಣ್ಣ ಅವರನ್ನು ತೆಗೆಯಲು ನಡೆದಿತ್ತಾ ಪ್ಲಾನ್? ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿಯಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜಣ್ಣ ಹೇಳಿಕೆ ಪ್ರಕಾರ, ಇದು ಒಂದೇ ಬಾರಿ ನಡೆದ ವಿಷಯವಲ್ಲ ನಾಲ್ಕು ಬಾರಿ ಅವರನ್ನು ಕಾಂಗ್ರೆಸ್‌ನಿಂದ ತೆಗೆಯುವ ಪ್ಲಾನ್ ನಡೆದಿತ್ತಂತೆ. 1984, 1994 ಮತ್ತು 2004ರಲ್ಲಿ ಕಾಂಗ್ರೆಸ್‌ನಿಂದ ತಮ್ಮನ್ನು ಹೊರಹಾಕಲು ಯತ್ನಿಸಲಾಯಿತು. ಅಲ್ಲದೇ, ತುಮಕೂರಿನಲ್ಲಿ ಮಾಜಿ ಪ್ರಧಾನಮಂತ್ರಿಗಳು ಲೋಕಸಭೆಗೆ ಸ್ಪರ್ಧಿಸಿ ಸೋತಾಗಲೂ ತಮ್ಮ ವಿರುದ್ಧ ಪ್ಲಾನ್ ನಡೆದಿತ್ತೆಂದು ಅವರು ಬಹಿರಂಗಪಡಿಸಿದರು. ಆದರೆ, ಆ ಯೋಜನೆಗಳು ಯಾವತ್ತೂ ಸಫಲವಾಗಲಿಲ್ಲ ಎಂದರು.

ನೋಡ್ರಿ… ರಾಜಣ್ಣ ರಾಜಣ್ಣನೇ! ಬೇರೆ ರಾಜಣ್ಣನನ್ನು ಹುಡುಕಲು ಸಾಧ್ಯವಿಲ್ಲ! ಎಂದು ರಾಜಣ್ಣ ವ್ಯಂಗ್ಯವಾಡಿದರು. ನನಗೆ ಅಧಿಕಾರ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ಸಚಿವ ಸ್ಥಾನ ಸಿಕ್ಕರೆ ವಿಶೇಷ ಎನ್ನಿಸುವುದಿಲ್ಲ. ಅಧಿಕಾರ ಇದ್ದಾಗ ನಾನು ಉತ್ತಮ ಕೆಲಸ ಮಾಡಿದ್ದೇನೆ, ಬೇಕಾದರೆ ಕೇಳಿ ನೋಡಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿರುವ ವಿಚಾರಕ್ಕೂ ಅವರು ಸ್ಪಷ್ಟನೆ ನೀಡಿದರು. ಬಿಹಾರ ಚುನಾವಣೆ ಮುಗಿಯುವವರೆಗೆ ಶಾಂತವಾಗಿರಿ ಎಂದು ಹೇಳಲಾಗಿದೆ. ಸಿಎಂ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ನಾನು ಯಾರನ್ನೂ ಸಚಿವ ಸ್ಥಾನಕ್ಕಾಗಿ ಕೇಳಿಲ್ಲ ಎಂದರು.

2018ರ ಚುನಾವಣೆಯಲ್ಲಿ ತಾವು ಸೋತಿದ್ದ ಕಾರಣ ಕಣ್ಣಯ್ಯನಿಗೆ ಬದಲಾಗಿ ತುಕಾರಾಂ ಅವರಿಗೆ ಅವಕಾಶ ನೀಡಲಾಗಿತ್ತೆಂದು ರಾಜಣ್ಣ ಸ್ಮರಿಸಿದರು. ಈ ಬಾರಿ ಗೆದ್ದ ನಂತರ ಸಹಕಾರ ಖಾತೆ ಕೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? 35 ಶಾಸಕರ ಪೈಕಿ ನಾನೊಬ್ಬನೇ ಸಹಕಾರ ಖಾತೆ ಕೇಳಿದ್ದೇನೆ. ಈ ಖಾತೆಯ ಮೂಲಕ ರೈತರಿಗೆ ರಾಜ್ಯ ಹಾಗೂ ಕೇಂದ್ರದಿಂದ ನೆರವು ದೊರಕಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss