ಸಣ್ಣ ಅನುಮಾನದಿಂದ ಆರಂಭವಾದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಕೊಡಲಿಯಿಂದ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಪತಿ ಬಳಿಕ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ.
ಮೃತ ಮಹಿಳೆಯನ್ನ ಪುಷ್ಪ (24) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದ ನಿಮಿತ್ತ ಪ್ರತಿದಿನ ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದರು. ಇದೇ ವಿಚಾರವಾಗಿ ಪತಿ ಮಹೇಶ್‌ಗೆ ಅನುಮಾನ ಹುಟ್ಟಿದ್ದು, ದಂಪತಿ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಕೆಲಸ ಮುಗಿಸಿ ಪುಷ್ಪ ಮನೆಗೆ ಬಂದಾಗ ಮತ್ತೆ ಇಬ್ಬರ ನಡುವೆ ಇದೇ ವಿಚಾರವಾಗಿ ತೀವ್ರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ ವೇಳೆ ಆಕ್ರೋಶಗೊಂಡ ಮಹೇಶ್ ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಬಳಿಕ ದಿಂಬಿನಿಂದ ಮುಖ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಮಹೇಶ್ ಸ್ವತಃ ನರಸಿಂಹರಾಜ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆಅನುಮಾನ ಮತ್ತು ಕೌಟುಂಬಿಕ ಕಲಹದಿಂದ ಉಂಟಾದ ಈ ಭೀಕರ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿಸಿದ್ದಾರೆ.




