Political News: ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮಂಡ್ಯದ ಮದ್ದೂರಿಗೆ ಆಗಮಿಸಿದ್ದು, ಯತ್ನಾಳ್ ಅವರನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು.
ಈ ವೇಳೆ ಮಾತನಾಡಿರುವ ಯತ್ನಾಳ್, ಭರ್ಜರಿ ಸ್ವಾಗತ, ಗೌರವ ನೀಡಿದ ಮದ್ದೂರಿನ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಹಿಂದೂ ಧರ್ಮಾಚರಣೆ, ಹಬ್ಬ, ಹರಿದಿನಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಲ್ಲು ತೂರುವ ಮತಾಂಧರ ಮೇಲೆ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿಕೆ ನೀಡಿ ಮದ್ದೂರಿನಲ್ಲಾದ ಗಲಾಟೆಗೆ ಮುಸಲ್ಮಾನರು ಕಾರಣ ಎಂದು ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದರು.
ಕಳೆದ ವರ್ಷ ನಾಗಮಂಗಲದಲ್ಲೂ ಇದೆ ರೀತಿಯಾದ ಘಟನೆಯಾಗಿದ್ದನ್ನು ನಾವು ಸ್ಮರಿಸಬಹುದು. ಹಿಂದೂ ಉತ್ಸವಗಳ ಮೇಲೆ ಕಲ್ಲು ತೂರುವ ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಹಾಗೂ ಸರ್ಕಾರದಿಂದ ಪಡೆಯುತ್ತಿರುವ ಯಾವುದೇ ಸೌಲಭ್ಯವಿದ್ದರೂ ಸಹ ಅದನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮೊಟಕುಗೊಳಿಸಬೇಕು. ಹಿಂದೂಗಳ ಒಗ್ಗಟ್ಟಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಧರ್ಮರಕ್ಷಣೆಗೆ ನಾನು ಸದಾ ಬದ್ದ ಹಾಗೂ ರಾಜ್ಯದ ಯಾವುದೇ ಕಡೆ ಹಿಂದೂಗಳ ಮೇಲೆ ಅನ್ಯಾಯವಾದರೂ ಸಹ ನಾನು ಅವರೊಂದಿಗೆ ಇರುತ್ತೇನೆಂದು ಯತ್ನಾಳ್ ಹೇಳಿದ್ದಾರೆ.
ಹಿಂದೂ ಉತ್ಸವಾಚರಣೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಡಗರ, ಸಂಭ್ರಮ ದಿಂದ ಗಣೇಶೋತ್ಸವವನ್ನು ಆಚರಿಸಬೇಕು. ಕಲ್ಲು ತೂರಾಟದಲ್ಲಿ ಬಂಧಿತರಾಗಿರುವವರಿಗೆ ಕಾನೂನು ನೆರವು ನೀಡೋದಿಲ್ಲ ಎಂದು ಶಪಥಗೈದಿರುವ ಮದ್ದೂರಿನ ವಕೀಲರಿಗೆ ನನ್ನ ಕೃತಜ್ಞತೆಗಳು. ಅಪರಾಧಿಗಳಿಗೆ, ದುಷ್ಕರ್ಮಿಗಳಿಗೆ, ಕಲ್ಲು ತೂರಾಟ ಮಾಡಿದವರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿದರಷ್ಟೇ ಮುಂದೆ ಈ ರೀತಿ ಘಟನೆಗಳು ಮರುಕಳಿಸುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ .
ಮಕ್ಕಳಿಗೆ ಸಂಸ್ಕೃತಿ, ಶಿಕ್ಷಣ ನೀಡುವ ವಯಸ್ಸಿನಲ್ಲಿ ಹಿಂದೂ ಧರ್ಮದ ಉತ್ಸವಗಳ ಮೇಲೆ ಉಗಿಯುವುದು, ಕಲ್ಲು ತೂರುವುದನ್ನು ಹೇಳಿಕೊಡುತ್ತಿರುವುದು ಖಂಡನೀಯ. ಕಲ್ಲು ತೂರುವ ಘಟನೆಯಲ್ಲಿ ಮಕ್ಕಳನ್ನು ಬಳಸಿದ್ದರೂ (Juveniles ) ಸಹ ಕಾನೂನು ರೀತ್ಯ ಅವರ ಪೋಷಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗಾಯಾಳುಗಳಿಗೆ ಮಸೀದಿಯ ಆಡಳಿತ ಮಂಡಳಿಯೇ ಪೂರ್ಣ ಖರ್ಚು ವೆಚ್ಚ ಭರಿಸಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಇನ್ನು ಮುಂದೆ ಕಲ್ಲು ತೂರಾಟವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಸ್ತ ಹಿಂದೂ ಬಾಂಧವರಿಗೆ ಎಂದು ಯತ್ನಾಳ್ ಹೇಳಿದ್ದಾರೆ.
ತಾಯಿ ಮದ್ದೂರಮ್ಮನ ನಾಡಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಹಿಂದೂ ಒಗ್ಗಟ್ಟನ್ನು ಪ್ರದರ್ಶಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ವಿಶೇಷವಾಗಿ ನನಗೆ ಆಮಂತ್ರಣ ನೀಡಿದ ಆಯೋಜಕರಿಗೆ, ಮದ್ದೂರಿನ ಹಿಂದೂ ಕಲಿಗಳಿಗೆ ನನ್ನ ಕೃತಜ್ಞತೆಗಳು. ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ ತಾಯಿ ಮದ್ದೂರಮ್ಮ ಎಲ್ಲರಿಗೂ ಒಳಿತನ್ನು ಮಾಡಲಿ ಜೈ ಶ್ರೀ ರಾಮ ಎಂದು ಯತ್ನಾಳ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.