ಇಡೀ ರಾಜ್ಯದ ರಾಜಕಾರಣ ಒಂದಾದ್ರೆ, ಬೆಳಗಾವಿ ರಾಜಕೀಯದ ಕಿಚ್ಚೇ ಬೇರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಜಾರಕಿಹೊಳಿ, ಕತ್ತಿ ಫ್ಯಾಮಿಲಿ ನಡುವಿನ ಸಮರ ಜೋರಾಗಿದೆ. ಎಲ್ಲೇ ಹೋದ್ರೂ ಪರಸ್ಪರ ವಾಗ್ದಾಳಿ, ಟೀಕೆ-ಟಿಪ್ಪಣಿಗಳನ್ನ ನಡೆಸ್ತಿದ್ದಾರೆ. ಸದ್ಯ, ರಮೇಶ್ ಕತ್ತಿ ವಿರುದ್ಧ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗುಡುಗಿದ್ದಾರೆ.
ರಾಜಕಾರಣ ಎಂದ್ರೆ ತಂತ್ರಗಾರಿಕೆ ನಡೆಯುವುದು ಸಹಜ. ಅಗತ್ಯವಿದ್ದಷ್ಟು ಪ್ರತಿಕ್ರಿಯೆ ನೀಡ್ತೇನೆ. ಇಲ್ಲದಿದ್ದರೆ ಮಾತನಾಡಲ್ಲ. ರಮೇಶ್ ಕತ್ತಿ ಆರೋಪಗಳಿಗೆಲ್ಲಾ, ಹುಕ್ಕೇರಿಯಲ್ಲೇ ಉತ್ತರಿಸುತ್ತೇನೆ ಅಂತಾ ಬಾಲಚಂದ್ರ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಹುಕ್ಕೇರಿಯ ಕೆಲವೆಡೆ ಗಲಾಟೆಗಳಾಗಿವೆ. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣ ಬಂದ್ರೆ ಈ ರೀತಿ ಗಲಾಟೆಗಳು ಆಗುತ್ತವೆ. ಚುನಾವಣೆ ಬಳಿಕ ರಾಜಕಾರಣದ ಸರ್ಕಸ್ ಇದ್ದೇ ಇರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಫೈಟ್ ಮಾಡುತ್ತಿದ್ದಾರೆ. ನಾವು ಸಮಾಧಾನದಿಂದ ಚುನಾವಣೆ ಮಾಡುತ್ತೇವೆ.
ಬಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ, ನಾವು ಸ್ಪಷ್ಟ ಬಹುಮತ ಸಾಧಿಸುವ ಮೂಲಕ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ. ಹುಕ್ಕೇರಿ, ಕಿತ್ತೂರು ಮತ್ತು ರಾಮದುರ್ಗದಲ್ಲಿ, ಯಾರ ಮೇಲೆ ಜನರ ಪ್ರೀತಿ ಇದೆಯೋ, ಅವರು ಗೆಲುವು ಸಾಧಿಸುತ್ತಾರೆ. 16ರಲ್ಲಿ 12 ನಿರ್ದೇಶಕರನ್ನು ಗೆಲ್ಲಿಸಿ, ಅಧಿಕಾರ ಹಿಡಿಯುತ್ತೇವೆ. ಆದಷ್ಟು ಅವಿರೋಧ ಆಯ್ಕೆಗೆ ಪ್ರಯತ್ನಿಸುತ್ತೇವೆ ಅಂತಾ ಬಾಲಚಂದ್ರ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.