ಹೆಣ್ಣು ಮಕ್ಕಳು ಮನೆಯಲ್ಲೇ ಕೂತು ಶುರು ಮಾಡಬಹುದಾದ ಕೆಲಸಗಳ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇದೀಗ ಮನೆಯಿಂದಲೇ ಉಪ್ಪಿನಕಾಯಿ ಉದ್ಯಮ ಮಾಡಿ ಲಾಭ ಗಳಿಸುವುದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.
ವಿವಿಧತೆಯಲ್ಲಿ ಏಕತೆ ಕಂಡ ಭಾರತದಲ್ಲಿ, ತರಹ ತರಹದ ತಿಂಡಿ ತಿನಿಸುಗಳಿಗೇನು ಕಡಿಮೆ ಇಲ್ಲ. ಒಂದೊಂದು ರಾಜ್ಯಕ್ಕೆ ತಕ್ಕಂತೆ ಒಂದೊಂದು ವೆರೈಟಿ ಊಟ ಸಿಗುತ್ತದೆ. ಆದ್ರೆ ಈ ಎಲ್ಲ ಊಟದ ಜೊತೆ ಉಪ್ಪಿನಕಾಯಿ ಇಲ್ಲದಿದ್ರೆ ಹೇಗೆ..? ಹಲವು ತರಹದ ಉಪ್ಪಿನಕಾಯಿಗಳು ಕಾಣ ಸಿಗುತ್ತದೆ. ಅಂತೆಯೇ ನೀವು ಕೂಡ ನಿಮಗೆ ಬರುವಂಥ ವಿವಿಧ ತರಹದ ಉಪ್ಪಿನಕಾಯಿ ಮಾಡಿ ಮಾರಬಹುದು.
ಇನ್ನು ಉಪ್ಪಿನಕಾಯಿ ಮಾಡೋದನ್ನ ಕಲಿಯೋಕ್ಕೆ ಕೆಲ ಕಡೆ ತರಬೇತಿಯನ್ನೂ ನೀಡಲಾಗತ್ತೆ. ಆದ್ರೆ ನೀವು ನಿಮ್ಮ ಮನೆ ಹಿರಿಯರ ಬಳಿಯೇ ಉಪ್ಪಿನಕಾಯಿ ರೆಸಿಪಿ ಕಲಿಯಿರಿ. ಉಪ್ಪಿನಕಾಯಿ ಹಾಕೋದ್ರಲ್ಲಿ ಅಜ್ಜಿ ಅಮ್ಮಂದಿರಿಗಿಂತ ಎಕ್ಸ್‌ಪರ್ಟ್ ಯಾರಿರ್ತಾರೆ ಹೇಳಿ..?
ಮಾವಿನಕಾಯಿ, ನಿಂಬೆಹಣ್ಣು, ಮೆಣಸಿನಕಾಯಿ, ಬೆಳ್ಳುಳ್ಳಿ, ಎಲ್ಲ ತರಕಾರಿಗಳ ಉಪ್ಪಿನಕಾಯಿ.. ಇವುಗಳಲ್ಲಿ ಒಂದು ತರಹದ ಉಪ್ಪಿನಕಾಯಿ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಇದ್ರೆ ಸಾಕು. ಮನೆಯಲ್ಲೇ ಕುಳಿತು ಉಪ್ಪಿನಕಾಯಿ ಉದ್ಯಮ ಶುರು ಮಾಡಬಹುದು.
ಹತ್ತು ಸಾವಿರ ಬಂಡವಾಳ ಹಾಕಿ ಉಪ್ಪಿನಕಾಯಿ ಉದ್ಯಮ ಶುರುಮಾಡಬಹುದು. ಮೊದಲು ಸ್ವಲ್ಪ ಉಪ್ಪಿನಕಾಯಿ ಮಾಡಿ ನಿಮ್ಮ ಪರಿಚಯದವರು, ಅಕ್ಕಪಕ್ಕದ ಮನೆಯವರಿಗೆ ಟೇಸ್ಟ್ ನೋಡಲು ಕೊಡಿ. ಅವರಿಗೆ ನಿಮ್ಮ ಉಪ್ಪಿನಕಾಯಿ ಇಷ್ಟವಾದರೆ, ನಿಮ್ಮ ಉದ್ಯಮದ ಬಗ್ಗೆ ಹೇಳಿ.
ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲೂ ನಿಮ್ಮ ಉದ್ಯಮವನ್ನ ಮುಂದುವರಿಸಬಹುದು. ತಿಂಡಿ- ಊಟದ ಬಗ್ಗೆ ವಾಟ್ಸಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಸುಮಾರು ಗ್ರೂಪ್‌ಗಳು ಕ್ರಿಯೇಟ್ ಆಗಿರುತ್ತದೆ. ಅಂಥ ಗ್ರೂಪ್‌ನಲ್ಲಿ ನೀವು ಸೇರಿ ನಿಮ್ಮ ಉಪ್ಪಿನಕಾಯಿಯನ್ನು ಪ್ರಮೋಟ್ ಮಾಡಿ. ನೀವು ಮಾಡುವ ಉಪ್ಪಿನಕಾಯಿಯ ವಿಶೇಷತೆಗಳು, ಅವು ಬೇಕಾದ್ರೆ ಯಾವ ರೀತಿ ಕೊಂಡುಕೊಳ್ಳಬಹುದೆಂಬ ವಿಚಾರವನ್ನ ಈ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಿ. ಈ ರೀತಿ ಆನ್ಲೈನ್ ಉದ್ಯಮ ಕೂಡ ಆರಂಭಿಸಬಹುದು.
ಈ ಮೂಲಕ ನಿಮ್ಮ ಉಪ್ಪಿನಕಾಯಿ ಉದ್ಯಮ ಕೊಂಚ ಲಾಭಗಳಿಕೆ ಶುರು ಮಾಡಿರುತ್ತದೆ. ಈಗ ನೀವು ಉಪ್ಪಿನಕಾಯಿಯನ್ನು ಹೊಟೇಲ್, ಅಂಗಡಿಗಳಲ್ಲಿ ಮಾರಲು ಶುರು ಮಾಡಿ. ನೀವು ಮಾಡಿದ ಪಿಕಲ್ ಟೇಸ್ಟ್ ಚೆನ್ನಾಗಿದ್ದರೆ, ಅಂಗಡಿಯವರು ನಿಮ್ಮ ಬಳಿಯೇ ಉಪ್ಪಿನಕಾಯಿ ತೆಗೆದುಕೊಳ್ಳುತ್ತಾರೆ.
ಈ ಉದ್ಯಮದಲ್ಲಿ ಲಾಭ ಕಂಡಬಳಿಕ ನಿಮ್ಮ ಉಪ್ಪಿನಕಾಯಿಗೊಂದು ಬ್ರ್ಯಾಂಡ್ ನೇಮ್ ಕೊಡಿ. ಇದಕ್ಕಾಗಿ ಟ್ರೇಡ್ ಮಾರ್ಕ್, ಮತ್ತು ಬ್ರ್ಯಾಂಡ್ ಹೆಸರನ್ನ ರೆಜಿಸ್ಟ್ರೇಷನ್ ಮಾಡಿಸಬೇಕು. ಅಲ್ಲದೇ ಲೈಸೆನ್ಸ್ ಕೂಡ ಪಡೆಯಬೇಕಾಗುತ್ತದೆ.
ಇನ್ನು ಮುಖ್ಯವಾದ ವಿಷಯ ಅಂದ್ರೆ ಜನ ಆಹಾರದ ಕ್ವಾಂಟಿಟಿ ಕ್ವಾಲಿಟಿಯನ್ನ ನೋಡ್ತಾರೆ. ಹಾಗಾಗಿ ಇಲ್ಲಿ ಸ್ವಚ್ಛತೆ ಮುಖ್ಯವಾಗಿರುತ್ತದೆ. ನೀವು ಕೊಡುವ ಆಹಾರದ ರುಚಿ ಹಿಡಿಸದಿದ್ದರೆ, ಅಥವಾ ನಿಮ್ಮ ರೆಗ್ಯೂಲರ್ ಕಸ್ಟಮರ್ಸ್ ಗಳು ಉಪ್ಪಿನಕಾಯಿ ಕೊಂಡಾಗ, ಒಮ್ಮೆ ಅವರಿಗೆ ಹಿಡಿಸದಿದ್ದರೆ, ಮತ್ತೆ ಅವರು ನಿಮ್ಮ ಬಳಿ ಉಪ್ಪಿನಕಾಯಿ ತೆಗೆದುಕೊಳ್ಳುವುದಿಲ್ಲ. ಈ ಕಾರಣಕ್ಕೆ ರುಚಿ ಶುಚಿ ಒಂದೆ ರೀತಿ ಇರುವಂತೆ ನೋಡಿಕೊಳ್ಳಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ