ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಸರ್ಕಾರ ರಚನೆಯಾದ ಕೇವಲ 20 ದಿನಗಳಲ್ಲಿ ಈ ಭರವಸೆ ಈಡೇರಿಸಲು ಹೊಸ ಶಾಸನ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ನಿರುದ್ಯೋಗ ಬಿಹಾರದ ಅತ್ಯಂತ ದೊಡ್ಡ ಸಮಸ್ಯೆ. ಕಳೆದ 20 ವರ್ಷಗಳಿಂದ ಆಡಳಿತದಲ್ಲಿದ್ದ ಈ ಸರ್ಕಾರ ಅದನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಅಧಿಕಾರಕ್ಕೆ ಬಂದ ತಕ್ಷಣ, ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದನ್ನು ಕಾನೂನಿನ ಮೂಲಕ ಖಚಿತಪಡಿಸುತ್ತೇವೆ ಎಂದರು.
ಎನ್‌ಡಿಎ ಮೈತ್ರಿಕೂಟದ ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಕೇವಲ ನಿರುದ್ಯೋಗ ಭತ್ಯೆಯ ಭರವಸೆ ನೀಡಿವೆ. ಆದರೆ ವಿರೋಧ ಪಕ್ಷಗಳ ಮೈತ್ರಿಕೂಟ ಹೊಸ ಶಾಸನದ ಮೂಲಕ ಸರ್ಕಾರಿ ಉದ್ಯೋಗವಿಲ್ಲದ ಪ್ರತೀ ಕುಟುಂಬಕ್ಕೂ ಒಂದು ಸರ್ಕಾರಿ ಉದ್ಯೋಗ ನೀಡುವ ಯೋಜನೆ ರೂಪಿಸಿದೆ.
ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫಲಿತಾಂಶವನ್ನು ನವೆಂಬರ್ 14ರಂದು ಘೋಷಿಸಲಾಗುತ್ತದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




